

ಗೊಳಸಂಗಿ: ಗ್ರಾಮ ಸೇರಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಕರೊನಾ ನೆಪದಲ್ಲಿ ಸಾವಿನ ಸರಣಿ ಪ್ರಕರಣ ಮುಂದುವರಿದಿದ್ದರೂ ಸೋಮವಾರ ಮೊದಲ ದಿನದ ಲಾಕ್‌ಡೌನ್‌ಗೆ ಬಹುತೇಕ ಗ್ರಾಮಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಗೊಳಸಂಗಿಯಲ್ಲಿ ತಾಲೂಕು ಮತ್ತು ಪೊಲೀಸ್ ಠಾಣಾಧಿಕಾರಿಗಳ ಎದುರಿಗಿದ್ದಾಗ ಮಾತ್ರ ಗ್ರಾಮಸ್ಥರು ಶಿಸ್ತಿನ ಸಿಪಾಯಿಯಂತೆ ನಡೆದುಕೊಳ್ಳುತ್ತಿದ್ದರು. ನಂತರ ಯಥಾಸ್ಥಿತಿಯಲ್ಲಿ ಸಂಚರಿಸುತ್ತಿದ್ದರು.
ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರೆ, ಕೆಲವಡೆ ಇನ್ನೂ ಕದ್ದು ಮುಚ್ಚಿ ವ್ಯಾಪಾರ ನಡೆಸಿದ್ದು ಕಂಡು ಬಂದಿತು. ಕೆನರಾ ಬ್ಯಾಂಕ್ ಮುಂದೆ ವಹಿವಾಟಿನ ನೆಪದಲ್ಲಿ ಮಧ್ಯಾಹ್ನದವರೆಗೂ ಜನಸಂದಣಿ ಕಂಡುಬಂದಿತು.
ಏತನ್ಮಧ್ಯೆ ಸೋಮವಾರ ಬೆಳಗ್ಗೆ ನಿಡಗುಂದಿ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಎನ್‌ಟಿಪಿಸಿ ಪೊಲೀಸ್ ಠಾಣೆ ಪಿಎಸ್‌ಐ ರೇಣುಕಾ ಜಕನೂರ ತಮ್ಮ ಸಿಬ್ಬಂದಿಯೊಂದಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಕ್‌ಡೌನ್ ನಿಯಮಾವಳಿ ಪಾಲಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
80 ಬೈಕ್, 12 ಕಾರು ಸೀಜ್
ಕಟ್ಟುನಿಟ್ಟಿನ ಕರ್ಫ್ಯೂ ಇದ್ದರೂ ಕೆಲವರು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಕೂಡಗಿ ಎನ್‌ಟಿಪಿಸಿ ಪೊಲೀಸರು ತರಾಟೆಗೆ ತೆಗೆದುಕೊಂಡರಲ್ಲದೆ, 80 ಬೈಕ್ ಮತ್ತು 12 ಕಾರುಗಳನ್ನು ವಶಕ್ಕೆ ಪಡೆದರು. ಲಾಕ್‌ಡೌನ್ ಅವಧಿ ಮುಗಿಯುವವರೆಗೂ ಠಾಣಾ ವ್ಯಾಪ್ತಿಯಲ್ಲಿರುವ ವಾಹನಗಳನ್ನು ಬಿಡುವುದಿಲ್ಲ. ನಂತರ ನ್ಯಾಯಾಲಯದ ಮೂಲಕ ಪಡೆಯಬಹುದಾಗಿದೆ ಎಂದು ಪಿಎಸ್‌ಐ ರೇಣುಕಾ ಜಕನೂರ ತಿಳಿಸಿದ್ದಾರೆ.
ಇನ್ನು ಕೂಡಗಿ ಎನ್‌ಟಿಪಿಸಿ ಕಾರ್ಮಿಕರ ಸಂಚಾರಕ್ಕೂ ಕೂಡ ಯಾವುದೇ ವಿನಾಯಿತಿ ನೀಡಲಾಗಿಲ್ಲ. ರಸ್ತೆಗಿಳಿಯುವ ಎಲ್ಲರ ವಾಹನಗಳನ್ನೂ ಸೀಜ್ ಮಾಡಲಾಗುತ್ತದೆ. ಎನ್‌ಟಿಪಿಸಿ ಕಾರ್ಮಿಕರು ಕೆಲಸಕ್ಕಾಗಿ ಸಂಚರಿಸುವ ಕುರಿತು ಜಿಲ್ಲಾಧಿಕಾರಿಗಳು ಆದೇಶ ನೀಡುವವರೆಗೂ ಯಾವುದೇ ರೀತಿಯ ವಿನಾಯಿತಿ ನೀಡಲಾಗದು ಎಂದೂ ಪಿಎಸ್‌ಐ ಜಕನೂರ ತಿಳಿಸಿದ್ದಾರೆ.