ಲಾಕ್‌ಡೌನ್ ಮದ್ಯ ಮಾರಾಟಗಾರರಿಗೂ ಸಂಕಷ್ಟ

liquor
Published on

ಪಿ.ಬಿ.ಹರೀಶ್ ರೈ ಮಂಗಳೂರು

ದ.ಕ.ಜಿಲ್ಲೆಯಲ್ಲಿ ಪ್ರತೀ ದಿನ 65 ಸಾವಿರ ಲೀ, ಉಡುಪಿಯಲ್ಲಿ 35 ಸಾವಿರ ಲೀ. ಮದ್ಯ ಹಾಗೂ ಒಟ್ಟು ಸುಮಾರು 68 ಸಾವಿರ ಲೀಟರ್ ಬೀರ್ ಮಾರಾಟವಾಗುತ್ತಿತ್ತು. ಕರೊನಾ ಲಾಕ್‌ಡೌನ್‌ನಿಂದ ಈಗ ಎಲ್ಲವೂ ಬಂದ್. ಒಂದೆಡೆ ಮದ್ಯವ್ಯಸನಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೆ , ಇತ್ತ ಮದ್ಯ ಮಾರಾಟಗಾರರು ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದಾರೆ.

ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಗರಿಷ್ಠ ಪ್ರಮಾಣದ ಆದಾಯ ಬರುತ್ತಿದೆ. ಬಾರ್ ಮತ್ತು ವೈನ್ ಶಾಪ್ ಮಾಲೀಕರು ಪ್ರತೀವರ್ಷ ಪರವಾನಗಿ ನವೀಕರಿಸುವ ಸಂದರ್ಭ ಲಕ್ಷಾಂತರ ರೂ. ಶುಲ್ಕ ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಸರ್ಕಾರದ ಆದೇಶದ ಮೇರೆಗೆ ಆಗಾಗ ಬಂದ್ ನಡೆದರೂ, ಈ ಶುಲ್ಕದಲ್ಲಿ ರಿಯಾಯಿತಿ ಸಿಗುವುದಿಲ್ಲ.

ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮದ್ಯದಂಗಡಿಗಳಿದ್ದು, ಪ್ರತೀ ತಿಂಗಳು 4.27 ಕೋಟಿ ಲೀಟರ್ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆಯಿಂದ 2018-19ರಲ್ಲಿ 19,943 ಕೋಟಿ ರೂ.ಆದಾಯ ಸಂಗ್ರಹವಾಗಿದ್ದು, 2019-20ರಲ್ಲಿ 20,950 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷಿಸಲಾಗಿತ್ತು.

ಉತ್ಸವಕ್ಕೂ, ಚುನಾವಣೆಗೂ ಬಂದ್

ಮಂಗಳೂರು ನಗರದಲ್ಲಿ ಕಳೆದ ವರ್ಷದಲ್ಲಿ ಒಂದು ತಿಂಗಳಿಗೂ ಅಧಿಕ ದಿನ ಬಾರ್, ವೈನ್‌ಶಾಪ್‌ಗಳು ಬಂದ್ ಆಗಿವೆ. ಗಣೇಶೋತ್ಸವ ಮೆರವಣಿಗೆ, ಗಾಂಧಿ ಜಯಂತಿ, ಮೊಸರು ಕುಡಿಕೆ, ದಸರಾ, ಹೀಗೆ ವಿವಿಧ ಧಾರ್ಮಿಕ ಆಚರಣೆಗಳ ಸಂದರ್ಭ ಶಾಂತಿ, ಸುವ್ಯವಸ್ಥೆ ಕಾಪಾಡಲು ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗುತ್ತದೆ. ಲೋಕಸಭಾ ಚುನಾವಣೆ, ಮತ ಎಣಿಕೆ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ, ಮತ ಎಣಿಕೆ ಸಂದರ್ಭಗಳಲ್ಲೂ ಮದ್ಯದಂಗಡಿಗಳು ಬಂದ್ ಆಗಿದ್ದವು. ಡಿಸೆಂಬರ್‌ನಲ್ಲಿ ಗೋಲಿಬಾರ್‌ನಿಂದ ಬಂದ್ ಆಗಿದ್ದರೆ, ಈಗ ಲಾಕ್‌ಡೌನ್‌ನಿಂದ ಬಂದ್.

ಕಟ್ಟಡ ನಿರ್ಮಾಣ, ಮೀನುಗಾರಿಕೆ ಕ್ಷೀಣಿಸಿದ್ದೂ ಕಾರಣ ಅವಿಭಜಿತ ದ.ಕ.ಜಿಲ್ಲೆಯಲ್ಲಿ 800ಕ್ಕೂ ಅಧಿಕ ಮದ್ಯದಂಗಡಿಗಳಿವೆ. ಕರಾವಳಿಯಲ್ಲಿ ಮರಳು ಸಾಗಾಟ, ಗಣಿಗಾರಿಕೆ ಸ್ಥಗಿತಗೊಂಡದ್ದು ಪರೋಕ್ಷವಾಗಿ ಮದ್ಯದಂಗಡಿಗಳ ವ್ಯಾಪಾರದ ಮೇಲೆ ಪರಿಣಾಮ ಬೀರಿತ್ತು. ಕಟ್ಟಡ ನಿರ್ಮಾಣ ಕಾಮಗಾರಿ, ಮೀನುಗಾರಿಕೆ ಕಡಿಮೆಯಾದದ್ದು ಇನ್ನಷ್ಟು ಹೊಡೆತ ನೀಡಿತ್ತು. ಗ್ರಾಮಾಂತರ ಹಾಗೂ ನಗರದ ಮದ್ಯದಂಗಡಿಗಳಿಗೆ ಪ್ರತ್ಯೇಕ ಟಾರ್ಗೆಟ್ ನಿಗದಿಪಡಿಸಿ ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣದ ಮದ್ಯ ಮಾರಾಟ ಮಾಡಲೇಬೇಕೆಂದು ಇಲಾಖೆ ಆದೇಶವಿದೆ. ಜತೆಗೆ ಪ್ರತಿ ತಿಂಗಳು ಎಂಎಸ್‌ಐಎಲ್ ರಖಂ ಮಳಿಗೆಯಿಂದ ನಿರ್ದಿಷ್ಟ ಪ್ರಮಾಣದ ಮದ್ಯ ಖರೀದಿಸಲೇ ಬೇಕೆಂಬ ನಿಯಮವೂ ಇದೆ.

ಮಂಗಳೂರು ನಗರದಲ್ಲಿ ವೈನ್‌ಶಾಪ್ ಪರವಾನಗಿ ನವೀಕರಣಕ್ಕೆ 6 ಲಕ್ಷ ರೂ, ಬಾರ್ ಪರವಾನಗಿಗೆ 7.5 ಲಕ್ಷ ರೂ. ಶುಲ್ಕವನ್ನು ಮುಂಗಡವಾಗಿ ಪಾವತಿಸಬೇಕು. ಕಳೆದ ಮೂರು ವರ್ಷದಿಂದ ಮದ್ಯದಂಗಡಿಗಳ ವ್ಯಾಪಾರ ಕುಸಿದಿದೆ. ಈ ವರ್ಷ ಸತತ ಬಂದ್‌ನಿಂದ ಇನ್ನಷ್ಟು ವ್ಯವಹಾರ ಕುಸಿದಿದ್ದು, ಮಾಲೀಕರು ಸಂಕಷ್ಟದಲ್ಲಿದ್ದಾರೆ. ಇಲಾಖೆ ನಿಗದಿಪಡಿಸಿದ ಪ್ರಮಾಣದಲ್ಲಿ ಮದ್ಯ ಮಾರಾಟ ಸಾಧ್ಯ ವಾಗುವುದಿಲ್ಲ. -ಗಣೇಶ್ ಶೆಟ್ಟಿ, ಅಧ್ಯಕ್ಷ, ಬಾರ್ ಮಾಲೀಕರ ಅಸೋಸಿಯೇಶನ್, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net