

ರಾಮನಗರ: ಕರೊನಾ ಎರಡನೇ ಅಲೆ ನಿಯಂತ್ರಿಸಲು ಜಾರಿಗೆ ತರಲಾಗಿರುವ ಲಾಕ್‌ಡೌನ್‌ಗೆ ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಸೋಮವಾರ ಪೊಲೀಸ್ ಸರ್ಪಗಾವಲಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಕೆಲವರ ಅನಗತ್ಯ ಓಡಾಟದ ನಡುವೆಯೂ ಹೆಚ್ಚಿನ ಜನರು ಮನೆಯಲ್ಲಿಯೇ ಉಳಿಯುವ ಮೂಲಕ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದ್ದಾರೆ.
ಬೆಳಗ್ಗೆ 6-10ವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗಳನ್ನು ಮುಕ್ತಗೊಳಿಸಿರುವ ಪರಿಣಾಮ ಮಾರುಕಟ್ಟೆಗಳಲ್ಲಿ ಜನಜಂಗುಳಿ ಎಂದಿನಂತೆ ಇತ್ತು. ಪೊಲೀಸರು ಮತ್ತು ಮಾರುಕಟ್ಟೆ ಸಿಬ್ಬಂದಿ ಮೈಕ್ ಮೂಲಕ ಮಾಡುತ್ತಿದ್ದ ಮನವಿಗೆ ಯಾವುದೇ ಮನ್ನಣೆ ನೀಡದ ಸಾರ್ವಜನಿಕರು ತಮಗೂ ಕರೊನಾಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಖರೀದಿ ಭರಾಟೆಯಲ್ಲಿ ತೊಡಗಿದ್ದು ಕಂಡು ಬಂತು.
10 ಗಂಟೆ ನಂತರ ಸ್ತಬ್ಧ: ಇಡೀ ಜಿಲ್ಲೆಯ ನಗರ ಪ್ರದೇಶಗಳು 10 ಗಂಟೆ ನಂತರ ಸ್ತಬ್ಧಗೊಂಡವು. ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಬಾಗಿಲು ಹಾಕಿದ ಪರಿಣಾಮ ಜನಸಾಮಾನ್ಯರ ಓಡಾಟವೂ ಕಡಿಮೆ ಆಗಿ ಇಡೀ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಗ್ರಾಮೀಣ ಭಾಗದಲ್ಲೂ ಜನ ಜೀವನ ಸ್ತಬ್ಧಗೊಂಡು ಜನತೆ ಮನೆಯಲ್ಲಿಯೇ ಕಾಲ ತಳ್ಳುವಂತೆ ಆಯಿತು.
ನೆಪಗಳು ನೂರಾರು: ಲಾಕ್‌ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಪೊಲೀಸರು ಸೂಚನೆ ನೀಡಿರುವ ಹೊರತಾಗಿಯೂ ಕೆಲವರ ಓಡಾಟ ಎಂದಿನಂತೆ ಇತ್ತು. ವಾಹನ ಸವಾರರು ರಸ್ತೆಗೆ ಇಳಿಯುವ ಸಲುವಾಗಿ ನೂರಾರು ಕಾರಣಗಳನ್ನು ಮುಂದಿಟ್ಟುಕೊಂಡು ಪೊಲೀಸರ ಬಳಿ ಅಂಗಲಾಚುತ್ತಿದ್ದ ದೃಶ್ಯಗಳು ಕಂಡು ಬಂದವು. ಆಸ್ಪತ್ರೆಗೆ ಹೋಗಬೇಕು, ಮೆಡಿಕಲ್ ಶಾಪ್‌ಗೆ ಹೋಗಬೇಕು, ನಮ್ಮ ಹತ್ತಿರದ ಸಂಬಂಧಿ ಮೃತಪಟ್ಟಿದ್ದಾರೆ ಹೀಗೆ ಹಲವಾರು ಕಾರಣಗಳನ್ನು ಹೇಳಿಕೊಂಡು ಕೆಲವರು ಓಡಾಡುತ್ತಿದ್ದು, ಪೊಲೀಸರು ಇಂತಹ ಕಾರಣಗಳಿಗೆ ಉತ್ತರಿಸಲಾಗದೆ ಸುಮ್ಮನಾಗಿದ್ದಾರೆ.
ಅಸ್ಥಿ ತಂದವರು ವಾಪಸ್: ಶ್ರೀರಂಗಪಟ್ಟಣಕ್ಕೆ ಅಸ್ಥಿ ವಿಸರ್ಜನೆ ಮಾಡುವ ಸಲುವಾಗಿ ತೆರಳುತ್ತಿದ್ದ ಹಲವು ಕುಟುಂಬಗಳನ್ನು ಪೊಲೀಸರು ವಾಪಸ್ ಕಳುಹಿಸಿದ್ದು ಕಂಡುಬಂತು. ಬೆಳಗ್ಗೆ 10 ಗಂಟೆ ವೇಳೆಗೆ ಹೇಗಾದರೂ ಮಾಡಿ ಶ್ರೀರಂಗಪಟ್ಟಣಕ್ಕೆ ತಲುಪಬೇಕು ಎನ್ನುವ ಧಾವಂತದಲ್ಲಿ ಹೊರಟ ಕುಟುಂಬಗಳಿಗೆ, ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ನಿಷೇಧಿಸಲಾಗಿದೆ ಎನ್ನುವ ಮಾಹಿತಿ ನೀಡಿ ರಾಮನಗರದಲ್ಲಿಯೇ ತಡೆದು ವಾಪಸ್ ಕಳುಹಿಸಲಾಗಿದೆ.
ಲಸಿಕೆಗಾಗಿ ಬೆಂಗಳೂರಿನಿಂದ ಬಂದರು: ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣ ಮತ್ತಷ್ಟು ವಿಳಂಬವಾಗಬಹುದು ಎಂದು ಕೆಲವು ಬೆಂಗಳೂರು ನಿವಾಸಿಗಳು ರಾಮನಗರ ಮತ್ತು ಸುತ್ತಮುತ್ತಲ ಪ್ರದೇಶದ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಬಂದಿದ್ದಾರೆ. ಪೊಲೀಸ್ ತಪಾಸಣೆ ವೇಳೆ ಇದು ಪತ್ತೆಯಾಗಿದ್ದು, ಈ ವೇಳೆ ನೋಂದಣಿ ಮಾಹಿತಿ ತೋರಿಸಿ ಪೊಲೀಸರಿಂದ ಕೆಲವರು ಬಚಾವ್ ಆಗಿದ್ದಾರೆ.