

ರಾಮನಗರ : ಕರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿರುವ ಅೋಷಿತ ಲಾಕ್‌ಡೌನ್‌ನಿಂದಾಗಿ ಶುಕ್ರವಾರ ಜಿಲ್ಲಾ ಕೇಂದ್ರ ರಾಮನಗರ ಬಹುತೇಕ ಬಿಕೋ ಎನ್ನುತ್ತಿತ್ತು.
ಗುರುವಾರ ಮಧ್ಯಾಹ್ನದಿಂದಲೇ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿಮುಂಗಟ್ಟುಗಳನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಮುಚ್ಚಿಸಿತ್ತು. ಇದರಿಂದ ಜಿಲ್ಲಾ ಕೇಂದ್ರದಲ್ಲಿ ಜನದಟ್ಟಣೆ ಕಡಿಮೆ ಆಗಿತ್ತು. ಇದೇ ಪರಿಸ್ಥಿತಿ ಶುಕ್ರವಾರವೂ ಮುಂದುವರಿದ ಪರಿಣಾಮ ಬಹುತೇಕ ನಗರ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಆಗಿತ್ತು.
ಪೊಲೀಸರ ಕಾರ್ಯಾಚರಣೆ: ಶುಕ್ರವಾರ ಬೆಳಗ್ಗೆ ಕೆಲವು ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಅಗತ್ಯ ಸೇವೆಗಳಿಗೆ ಸೇರದ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರಕ್ಕೆ ಮುಂದಾಗಿದ್ದರು. ಆದರೆ ಈ ವೇಳೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಅಂಗಡಿ ಮಾಲೀಕರನ್ನು ಮನವೊಲಿಸಿ ಬಂದ್ ಮಾಡಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ನಗರದ ಐಜೂರು ವೃತ್ತ, ಕೆಂಪೇಗೌಡ ವೃತ್ತ, ಎಂ.ಜಿ.ರಸ್ತೆ, ಕಾಮಣ್ಣನಗುಡಿ ವೃತ್ತ, ರೈಲು ನಿಲ್ದಾಣ ರಸ್ತೆಯಲ್ಲಿ ಬಹುತೇಕ ವ್ಯಾಪಾರ ವಹಿವಾಟು ಬಂದ್ ಆಗಿತ್ತು.
ಎಲ್ಲರೂ ಸಹಕರಿಸಿ : ಕರೊನಾ ಬಿರುಗಾಳಿಯಂತೆ ಎಲ್ಲೆಡೆ ವ್ಯಾಪಿಸುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜನತೆ ಸ್ವಯಂ ಜಾಗೃತರಾಗಬೇಕಾಗಿದೆ. ಸರ್ಕಾರದ ಬಿಗಿ ಮಾರ್ಗಸೂಚಿ ಕ್ರಮಗಳ ನಡುವೆ ಜನತೆ ಅನಗತ್ಯ ಓಡಾಟ ನಡೆಸುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಇದ್ದು ಕರೊನಾ ಚೈನ್ ಲಿಂಕ್ ಅನ್ನು ಕತ್ತರಿಸಬೇಕಿದೆ. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಜನರೇ ನೇರ ಹೊಣೆಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮತ್ತು ಕುಟುಂಬದ ಕಾಳಜಿಗಾಗಿ ಮನೆಯಲ್ಲಿ ಇರಿ ಎನ್ನುವುದು ವಿಜಯವಾಣಿ ಕಳಕಳಿ.
ಮೈ ಮರೆತ ಅಭ್ಯರ್ಥಿಗಳು : ಲಾಕ್‌ಡೌನ್ ಶುಕ್ರವಾರ ರಾತ್ರಿಯಿಂದಲೇ ಆರಂಭವಾಗುವುದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕರೊನಾ ಭಯ ಬಿಟ್ಟು ಪ್ರಚಾರ ನಡೆಸಿದರು. ಅಲ್ಲದೆ, ಕರೊನಾ ನಿಯಮಗಳನ್ನು ಮೀರಿ ಪ್ರಚಾರ ಮಾಡಿದ್ದು ಎಲ್ಲೆಡೆ ಕಂಡು ಬಂತು. ಇನ್ನು ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರೆ, ಸಂಸದ ಡಿ.ಕೆ.ಸುರೇಶ್ ಸಹ ಪ್ರಚಾರ ಕಾರ್ಯ ನಡೆಸಿದರು. ಆದರೆ, ಕೋವಿಡ್ ನಿಯಮ ಮೀರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ.