ದ.ಕ.ದಲ್ಲಿ ಲಾಕ್ ಕೊಂಚ ಸಡಿಲಿಕೆ

Ballari Weekend Lockdown
ಬಳ್ಳಾರಿಯ ರಾಯಲ್ ವೃತ್ತದಲ್ಲಿ ಶನಿವಾರ ವಾಹನ ಓಡಾಟ ಕಂಡುಬಂತು.
Published on

ಮಂಗಳೂರು: ರಾಜ್ಯ ಸರ್ಕಾರ ಹೊರಡಿಸಿದ ಪರಿಷ್ಕೃತ ಲಾಕ್‌ಡೌನ್ ಆದೇಶದಲ್ಲಿ ಬದಲಾವಣೆ ತಂದಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಜೂ.21ರಿಂದ ಜುಲೈ 5ರವರೆಗೆ ಅನ್ವಯವಾಗುವಂತೆ ಹೊಸ ಸೂಚನೆಗಳನ್ನು ಹೊರಡಿಸಿದೆ.

ಜಿಲ್ಲೆಯಲ್ಲಿ 21ರಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗುವುದು. ರಾತ್ರಿ 7ರಿಂದ ಬೆಳಗ್ಗೆ 7ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವಾರಾಂತ್ಯ ಕರ್ಫ್ಯೂ ಇರಲಿದೆ. ಬಸ್ ಸಂಚಾರಕ್ಕೆ ಅನುಮತಿ ನೀಡದಿರಲು ನಿರ್ಧರಿಸಿದ್ದು, ಟ್ಯಾಕ್ಸಿ ಹಾಗೂ ಆಟೋಗಳಿಗೆ ಮಾತ್ರವೇ ಕಾರ್ಯಾಚರಿಸಲು ಅನುಮತಿಯಿತ್ತಿದೆ.

ಏನೇನು ಇದೆ, ಏನಿಲ್ಲ: ಆಹಾರ, ದಿನಸಿ, ಹಣ್ಣು-ತರಕಾರಿ, ಮಾಂಸ/ಮೀನು, ಹಾಲಿನ ಬೂತ್ ಮತ್ತು ಪ್ರಾಣಿಗಳ ಮೇವನ್ನು ಮಾರಾಟ ಮಾಡುವ ಅಂಗಡಿಗಳಿಗೆ ಅವಕಾಶವಿದೆ. ಬೀದಿ ಬದಿ ವ್ಯಾಪಾರಸ್ಥರು, ಪಡಿತರ ಅಂಗಡಿ, ಸ್ವತಂತ್ರೃ ಮದ್ಯದಂಗಡಿ ಮತ್ತು ಮಳಿಗೆಗಳಿಂದ ಪಾರ್ಸೆಲ್ ಕೊಂಡು ಹೋಗಬಹುದು. ಎಲ್ಲ ವಸ್ತುಗಳನ್ನು ದಿನದ 24 ಗಂಟೆ ಹೋಂ ಡೆಲಿವರಿ ಮಾಡಬಹುದು. ಸಿಮೆಂಟ್, ಸ್ಟೀಲ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿ ಅಂಗಡಿ, ಎಲ್ಲ ಕಟ್ಟಡ ನಿರ್ಮಾಣ ಚಟುವಟಿಕೆ, ದುರಸ್ತಿ ಕಾರ್ಯ ಮಾಡಬಹುದು. ಟ್ಯಾಕ್ಸಿ ಮತ್ತು ಆಟೋಗಳು ಗರಿಷ್ಠ ಇಬ್ಬರನ್ನು ಮಾತ್ರವೇ ಕರೆದೊಯ್ಯಬಹುದು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳೊಂದಿಗೆ ಕೃಷಿ ಸಂಬಂಧಿತ ಕಚೇರಿ, ಲೋಕೋಪಯೋಗಿ ಇಲಾಖೆ, ವಸತಿ, ಪ್ರಾದೇಶಿಕ ಸಾರಿಗೆ ಕಚೇರಿ, ಸಹಕಾರ ಮತ್ತು ನಬಾರ್ಡ್ ಇತ್ಯಾದಿಗೆ ಅವಕಾಶವಿದೆ.

ದ.ಕ.ಜಿಲ್ಲೆಯಲ್ಲಿ ಪಾರ್ಕ್ ಮತ್ತು ಉದ್ಯಾನವನ ತೆರೆಯಲು ಅವಕಾಶ ಇಲ್ಲ. ಕನ್ನಡಕದ ಅಂಗಡಿಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ತೆರೆಯಬಹುದು. ವಾರಾಂತ್ಯ ಕರ್ಫ್ಯೂನಲ್ಲೂ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ವಾರಾಂತ್ಯಗಳಲ್ಲಿ ತುರ್ತು, ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ 24 ಗಂಟೆ ಕಾರ್ಯವೆಸಗುವ ಕೈಗಾರಿಕೆಗಳ, ಕಂಪನಿಗಳ ಸಿಬ್ಬಂದಿ ತಮ್ಮ ಗುರುತುಚೀಟಿ ತೋರಿಸಿ ಕಾರ್ಯ ನಿರ್ವಹಿಸಬಹುದು.

ಅಂಚೆ ಕಚೇರಿ ಸಹಜ ವ್ಯವಹಾರ ಸಮಯ: ರಾಜ್ಯ ಸರ್ಕಾರದ ಅನ್‌ಲಾಕ್ ಮಾರ್ಗಸೂಚಿಯಂತೆ ಮಂಗಳೂರು ಅಂಚೆ ವಿಭಾಗದ ಎಲ್ಲ ಅಂಚೆ ಕಚೇರಿಗಳು ಜೂನ್ 21ರಿಂದ ಲಾಕ್‌ಡೌನ್‌ಗಿಂತ ಮೊದಲಿದ್ದ ಸಹಜ ವ್ಯವಹಾರ ಸಮಯದೊಂದಿಗೆ ಕಾರ್ಯನಿರ್ವಹಿಸಲಿದೆ. ಇಲಾಖಾ ಅಂಚೆ ಕಚೇರಿಗಳು ಸಾಯಂಕಾಲ 5ರ ತನಕ ತೆರೆದಿರಲಿದ್ದು, ವ್ಯವಹಾರ ಸಮಯ 9ರಿಂದ 2ರ ತನಕ ಹಾಗೂ ಶಾಖಾ ಅಂಚೆ ಕಚೇರಿಗಳು 9ರಿಂದ 2ರವರೆಗೆ ಸೇವೆ ನೀಡಲಿವೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net