ಕ್ಷಮಿಸಿ, ನಾನು ಕೋವಿಡ್ 19 ಲಾಕ್‌ಡೌನ್ ಉಲ್ಲಂಘಿಸಿರುತ್ತೇನೆ

dvg slate apr 17
Published on

ದಾವಣಗೆರೆ: ‘ಕ್ಷಮಿಸಿ, ನಾನು ಕೋವಿಡ್ 19 ಲಾಕ್‌ಡೌನ್ ಉಲ್ಲಂಘಿಸಿರುತ್ತೇನೆ.’

ಹೀಗೆ ಬರೆದಿದ್ದ ಸ್ಲೇಟು ಹಿಡಿಸಿದ್ದು ಜಿಲ್ಲಾಡಳಿತ. ಆ ಮೂಲಕವಾದರೂ ಸುಖಾಸುಮ್ಮನೆ ತಿರುಗಾಡುವವರಿಗೆ ತಾವು ಮಾಡಿದ್ದು ತಪ್ಪು ಎಂಬ ಭಾವನೆ ಮೂಡಬೇಕು. ಇಂತಹ ಉದ್ದೇಶದಿಂದ ಜಿಲ್ಲಾಡಳಿತದ ಅಕಾರಿಗಳು ಶುಕ್ರವಾರ ಬೀದಿಗಿಳಿದಿದ್ದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ನಗರದಲ್ಲಿ ಗಸ್ತು ತಿರುಗಿದ ಅಧಿಕಾರಿಗಳು ಲಾಕ್‌ಡೌನ್ ಉಲ್ಲಂಘಿಸಿದ 130 ಜನರನ್ನು ವಶಕ್ಕೆ ಪಡೆದು ಡಿಎಆರ್ ಸಮುದಾಯ ಭವನಕ್ಕೆ ಕರೆತಂದರು. ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಂಜೆಯವರೆಗೂ ಅಲ್ಲಿಯೇ ಕೂಡಿಸಿಕೊಂಡು, ನಂತರ ಬಿಡುಗಡೆ ಮಾಡಲಾಯಿತು.

ನಾಲ್ಕು ಕಮಾಂಡೊ ವಾಹನಗಳು, ಡಿಎಆರ್‌ನ 3 ತುಕಡಿಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ದುರ್ಗಾ ಪಡೆ ಸೇರಿದಂತೆ ಪೊಲೀಸ್ ಇಲಾಖೆಯ ವಾಹನಗಳು ಜತೆಯಲ್ಲೇ ಸಾಗಿದವು. ನಿಯಮ ಉಲ್ಲಂಸಿದವರ 581 ವಾಹನಗಳನ್ನು ವಶಕ್ಕೆ ಪಡೆಯಲಾಯಿತು.

ಅನಗತ್ಯವಾಗಿ ಹೊರಗೆ ಕಾಣಿಸಿದವರನ್ನು ತಡೆದು ನಿಲ್ಲಿಸಿದ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡರು. ಸಿಕ್ಕ ಸಿಕ್ಕವರನ್ನು ಹಿಡಿದು ಪೊಲೀಸ್ ವಾಹನ ಹತ್ತಿಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಮಹಿಳಾ ಪೊಲೀಸರು ವಿಚಾರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net