ಲಾಕ್‌ಡೌನ್ ಮತ್ತಷ್ಟು ಬಿಗಿ

10ravig4-Web
ಬೆಳಗಾವಿ ನಗರದಲ್ಲಿ ಶುಕ್ರವಾರ ಲಾಕ್‌ಡೌನ್ ಆದೇಶ ಉಲ್ಲಂಸಿ ಅನಗತ್ಯ ರಸ್ತೆಗೆ ಇಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
Published on

ಬೆಳಗಾವಿ: ಕರೊನಾ ವೈರಸ್ ಸೋಂಕಿತರ ಪ್ರಕರಣ 10ಕ್ಕೆ ಏರಿಕೆಯಾಗಿದ್ದರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್ ಮತ್ತಷ್ಟು ಕಠಿಣಗೊಳಿಸಿರುವ ಸರ್ಕಾರ, ಶುಕ್ರವಾರ ಮಧ್ಯಾಹ್ನದಿಂದ ಕೆಲ ಮಾರ್ಗಗಳನ್ನು ಬಂದ್ ಮಾಡಿದೆ. ತುರ್ತು ಸೇವೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಿದೆ.

ಈಗಾಗಲೇ ಸೋಂಕಿತರುವ ಪತ್ತೆಯಾಗಿರುವ ಬೆಳಗಾವಿ ತಾಲೂಕಿನ ಬೆಳಗುಂದಿ, ಹಿರೇಬಾಗೇವಾಡಿ, ಬೆಳಗಾವಿ ನಗರದ ಕ್ಯಾಂಪ್ ಪ್ರದೇಶ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಪ್ರದೇಶಗಳಲ್ಲಿ ಜನ ಸಂಚಾರವನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿದೆ.
ನಿಷೇಧದ ನಡುವೆಯೂ ನೆಪ ಹೇಳಿಕೊಂಡು ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ 107 ಬೈಕ್ ಹಾಗೂ ಒಂದು ಕಾರು ಸೇರಿ ಒಟ್ಟೂ 108 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಅಲ್ಲದೆ, ನಗರದ ಹಲವು ಕಡೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ, ಕಿಡಿಗೇಡಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು, ಶನಿ ಮಂದಿರ ಸೇರಿ ಇನ್ನಿತರ ಕಡೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದರು. ಬಸ್ಕಿ ಹೊಡೆಯುತ್ತಿರುವುದನ್ನು ಸ್ವತಃ ಪೊಲೀಸರೇ ಎಣಿಕೆ ಹಾಕಿ ಮತ್ತೆ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿರುವುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net