ಬಿಎಸ್4 ವಾಹನಗಳ ರಿಜಿಸ್ಟ್ರೇಶನ್​​ಗೂ​​ ಲಾಕ್​ಡೌನ್; ಮಾ. 31ರೊಳಗೆ ಖರೀದಿಸಿದ ವಾಹನ ನೋಂದಣಿ

Vehicles 28 april 20
Published on

ಬೆಂಗಳೂರು: ಭಾರತ್ ಸ್ಟೇಜ್-4 (ಬಿಎಸ್4) ಮಾಪನದ ವಾಹನಗಳ ನೋಂದಣಿಯನ್ನು ಸಾರಿಗೆ ಇಲಾಖೆ ಮತ್ತೆ ಆರಂಭಿಸಿದೆ. ತೆರಿಗೆ ಪಾವತಿಸಿರುವ ವಾಹನಗಳನ್ನು ಏ.30ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಆರ್​ಟಿಒ ಕಚೇರಿಗಳಿಗೆ ಸೂಚಿಸಿದೆ. ಆದರೆ, ಲಾಕ್​ಡೌನ್ ನಿಯಮ ಜಾರಿ ಯಲ್ಲಿರುವ ಹಿನ್ನೆಲೆಯಲ್ಲಿ ಶೋರೂಂ ಗಳು ತೆರೆಯದ ಕಾರಣ ಪ್ರಕ್ರಿಯೆ ನಡೆಯುತ್ತಿಲ್ಲ.

ಕೇಂದ್ರ ಸರ್ಕಾರದ ಸೂಚನೆಯಂತೆ 2020ರ ಏ.1ರಿಂದ ಬಿಎಸ್-4 ಮಾಪನದ ವಾಹನಗಳ ನೋಂದಣಿ ಸ್ಥಗಿತಗೊಳಿಸಲಾಗಿತ್ತು. ಮಾ.31ರವರೆಗೆ ಮಾರಾಟ ಮಾಡಿರುವ ವಾಹನಗಳನ್ನು ಖರೀದಿಸಿದ ಮಾಲೀಕರು ಅವುಗಳ ನೋಂದಣಿ ಮಾಡಿಸಿಕೊಳ್ಳಲಾಗಿಲ್ಲ. ಆ ರೀತಿಯ ವಾಹನಗಳ ನೋಂದಣಿಯನ್ನು ಮಾಡಿಕೊಡಲು ಮುಂದಾಗಿರುವ ಸಾರಿಗೆ ಇಲಾಖೆ, ಏ.30ರೊಳಗೆ ಅಗತ್ಯ ದಾಖಲೆ ನೀಡಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸೂಚಿಸಿದೆ.

ನೋಂದಣಿ ಶುಲ್ಕ, ಅರ್ಜಿ ಸಲ್ಲಿಕೆಗೆ ಆನ್​ಲೈನ್​ನಲ್ಲಿ ಅವಕಾಶವಿದೆ. ಆದರೆ, ಶೋ ರೂಂ ತೆರೆಯಲು ಅವಕಾಶವಿಲ್ಲ. ಅಲ್ಲದೆ ಶೋರೂಂನಿಂದ ವಾಹನಗಳನ್ನು ಹೊರಗೆ ತಂದರೆ ಪೊಲೀಸರು ಜಪ್ತಿ ಮಾಡುತ್ತಾರೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಹೇಗೆ ಸಾಧ್ಯ. ಈ ವಿಚಾರವಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಸ್ಪಷ್ಟ ನಿರ್ದೇಶನ ಕೊಡುವ ಅಗತ್ಯವಿದೆ ಎಂದು ಆರ್​ಟಿಒ ಅಧಿಕಾರಿಗಳು ಹೇಳಿದ್ದಾರೆ.

ಲಾಕ್​ಡೌನ್ ತೆರವು ನಂತರ ಮತ್ತೆ ನೋಂದಣಿ ಪ್ರಕ್ರಿಯೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಲಾಕ್​ಡೌನ್ ತೆರವಾದ ನಂತರ 10 ದಿನ ಬಿಎಸ್4 ವಾಹನಗಳ ಪೈಕಿ ಶೇ.10 ವಾಹನಗಳನ್ನು ಮಾರಾಟ ಹಾಗೂ ನೋಂದಣಿಗೆ ಅವಕಾಶ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಲಾಕ್​ಡೌನ್ ನಂತರವೂ ಮಾರಾಟವಾಗುವ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಸರ್ಕಾರದ ಸೂಚನೆಯಂತೆ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಸದ್ಯಕ್ಕೆ ಮಾ. 31ರೊಳಗೆ ಖರೀದಿ ಮಾಡಲಾದ ವಾಹನಗಳ ನೋಂದಣಿಯನ್ನಷ್ಟೇ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net