

ಬೆಂಗಳೂರು: ಕರೊನಾ ವೈರಸ್ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಲಾಕ್ಡೌನ್ (ದಿಗ್ಬಂಧನ) ವಿಧಿಸಲಾಗಿದ್ದರೂ ಕೆಲವರು ಇದನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಲಾಕ್ಡೌನ್ ಅವಧಿ ವಿಸ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾರಕ ಕರೊನಾ ಸೋಂಕು ತಡೆಗೆ ಜನರು ಮನೆಯಲ್ಲೇ ಇರಬೇಕು. ದೇಶದ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರವನ್ನು ಬೆಂಬಲಿಸಬೇಕಾಗಿದೆ. ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಕೆಲವು ನಗರ ಪ್ರದೇಶಗಳಲ್ಲಿನ ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಪೊಲೀಸರಿಗೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಸಬಾರದು. ಎಲ್ಲರೂ ನಿಯಮ ಪಾಲಿಸಿದರೆ ಏ. 14ಕ್ಕೆ ಲಾಕ್ಡೌನ್ ಅವಧಿ ಮುಗಿಯಲಿದೆ. ಇಲ್ಲದಿದ್ದರೆ ಮತ್ತೆ ವಿಸ್ತರಿಸಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಅಗತ್ಯ ವಸ್ತುಗಳ ಕೊರತೆ ಇಲ್ಲ
ದೈನಂದಿನ ಅಗತ್ಯ ವಸ್ತುಗಳು, ಆಹಾರ ಪದಾರ್ಥ, ಊಟಕ್ಕೆ ತೊಂದರೆಯಾಗದಂತೆ ಸರ್ಕಾರ ನಿಗಾವಹಿಸಿದೆ. ವದಂತಿಗಳಿಗೆ ಕಿವಿಗೊಡಬಾರದು. ಇನ್ನೂ 16 ದಿನ ಮನೆಯವರೊಂದಿಗೆ ಕಾಲ ಕಳೆಯಿರಿ. ಪುಸ್ತಕಗಳನ್ನು ಓದಿರಿ. ಬಡವರು ಇದ್ದ ಸ್ಥಳದಲ್ಲಿಯೇ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಎಂದು ಸಿಎಂ ಮನವಿ ಮಾಡಿದ್ದಾರೆ. ಕರೊನಾ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೈಗೊಂಡಿರುವ ಕ್ರಮಗಳು ಫಲಿತಾಂಶ ನೀಡುತ್ತಿವೆ. ಅವರ ದೂರದೃಷ್ಟಿ ಬಗ್ಗೆ ಹೆಮ್ಮೆ ಹಾಗೂ ಮೆಚ್ಚುಗೆಯೊಂದಿಗೆ ಆದೇಶ ಪಾಲಿಸಿ. ಲಾಕ್ಡೌನ್ ಮಾಡಿದ್ದಕ್ಕಾಗಿ ದೇಶದ ಜನರ ಬಳಿ ಪ್ರಧಾನಿ ಕ್ಷಮೆ ಕೋರಿದ್ದಾರೆ ಎಂದ ಮೇಲೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಲಾಕ್ಡೌನ್ ಕೊನೆಗೊಳ್ಳಲು ಜನರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.