

ತುಮಕೂರು: ಕರೊನಾಘಾತದಿಂದ ಮಹಾನಗರ ಪಾಲಿಕೆ ಆದಾಯಕ್ಕೂ ಕುತ್ತು ಬಂದಿದೆ. ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿ ಆರ್ಥಿಕ ಹೊಡೆತ ಬಿದ್ದಿದ್ದು, ಪಾಲಿಕೆಯ ತೆರಿಗೆ ಸಂಗ್ರಹದಲ್ಲೂ ದೊಡ್ಡ ಹಿನ್ನಡೆಯಾಗಿದೆ.
2019-20ನೇ ಸಾಲಿನ ಆರ್ಥಿಕ ವರ್ಷಾರಂಭದಲ್ಲೇ ಪಾಲಿಕೆ ಆಡಳಿತ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಏಪ್ರಿಲ್ ತಿಂಗಳಲ್ಲಿ 10 ಕೋಟಿ ರೂ., ತೆರಿಗೆ ಸಂಗ್ರಹವಾಗಿತ್ತು. ಆದರೆ, 2020-21ನೇ ಸಾಲಿನ ಆರ್ಥಿಕ ವರ್ಷವೂ ಕರೊನಾ ಮಹಾಮಾರಿಯೊಂದಿಗೆ ಆರಂಭವಾಗಿದ್ದು, ಪ್ರತೀ ವರ್ಷದಂತೆ ಏಪ್ರಿಲ್‌ನಲ್ಲಿ ಸ್ವಯಂ ಘೋಷಿತ ಆಸ್ತಿ ಪಾವತಿಗೆ ಶೇ.5 ರಿಯಾಯಿತಿ ನೀಡಿದಂತೆ ಈ ವರ್ಷವೂ ನೀಡಲಾಗಿದೆ. ಆದರೆ ಕೇವಲ 25 ಲಕ್ಷ ರೂ., ಮಾತ್ರ ತೆರಿಗೆ ಸಂಗ್ರಹವಾಗಿದೆ.
ಪಾಲಿಕೆ ಆದಾಯ ಮೂಲಕ್ಕೆ ಪೆಟ್ಟು: ಯುಜಿಡಿ, ನೀರು, ಕಂದಾಯ, ಸ್ವಯಂ ಆಸ್ತಿ ತೆರಿಗೆ ಸಂಗ್ರಹದಿಂದ ಪಾಲಿಕೆಯ ಆಡಳಿತದ ನಿರ್ವಹಣೆ ಸರಿದೂಗಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳು, ಜನಪರ ಕಾರ್ಯಕ್ರಮಗಳಿಗೆ ಅಲ್ಲದೆ, ಕೆಲವೊಂದು ನಿರ್ದಿಷ್ಟ ಸಿಬ್ಬಂದಿ ವೇತನಕ್ಕೂ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳಬೇಕು. ತೆರಿಗೆ ಸಂಗ್ರಹಕ್ಕೆ ಸಿಬ್ಬಂದಿ ತೆರಳಿದರೆ ಎಲ್ಲ ಉದ್ದಿಮೆಗಳು ಮುಚ್ಚಲ್ಪಟ್ಟಿವೆ. ಹಾಗಾಗಿ, ತೆರಿಗೆ ಸಂಗ್ರಹ ಇಳಿಮುಖವಾಗಿದೆ.
ಆನ್‌ಲೈನ್‌ನಲ್ಲೂ ಅವಕಾಶ : ಆನ್‌ಲೈನ್ ಮೂಲಕ ತೆರಿಗೆ ಪಾವತಿಸುವ ಅವಕಾಶ ಮಾಡಲಾಗಿದೆಯಾದರೂ, ಆಸ್ತಿದಾರರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲೆಂಬ ದೃಷ್ಟಿಯಿಂದ ಜನರ ಮನೆ ಬಾಗಿಲಿಗೆ ಬಿಲ್ ಕಲೆಕ್ಟರ್‌ಗಳು ತೆರಳಿ, ಕಂದಾಯ ಸಂಗ್ರಹಿಸುವ ಯತ್ನದಲ್ಲಿದ್ದಾರೆ.