ಲಾಕ್‌ಡೌನ್, ಇಬ್ಬರು ನೇಕಾರರು ಆತ್ಮಹತ್ಯೆ

Death 5 May 20
Published on

ಬೆಳಗಾವಿ: ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಮಾಡಿದ ಸಾಲ ತೀರಿಸಲಾಗದೆ ಜಿಲ್ಲೆಯಲ್ಲಿ ಇಬ್ಬರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ನಿವಾಸಿ ಹಾಗೂ ಉಳ್ಳಾಗಡ್ಡಿ- ಖಾನಾಪುರದ ಹತ್ತರಗಿ ಗ್ರಾಮದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಅಲಾರವಾಡ ಮೂಲದ ಹಾಗೂ ವಡಗಾವಿಯ ದೇವಾಂಗ ಗಲ್ಲಿಯ ನಿವಾಸಿ, ನೇಕಾರ ಕೂಲಿ ಕಾರ್ಮಿಕ ಸುಜಿತ್ ಉಪರಿ (38) ಮಾಡಿದ ಸಾಲ ತೀರಿಸಲಾಗದೆ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬ ನಿರ್ವಹಣೆಗಾಗಿ ವಿವಿಧ ಕಡೆ ಕೈಗಡ ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಲಾಕ್‌ಡೌನ್‌ನಿಂದ ವಿದ್ಯುತ್ ಮಗ್ಗಗಳು ಸ್ಥಗಿತಗೊಂಡು ಸಾಲ ಮರುಪವಾತಿಸಲು ಸಾಧ್ಯವಾಗದೆ ಮೇ 28ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿಯೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಜೂ. 4ರಂದು ರಾತ್ರಿ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ಮನೆಯ ಮಾಲೀಕ ಪರಿಶೀಲಿಸಿದಾಗ ಸುಜಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಗಡ್ಡಿ-ಖಾನಾಪುರ ವರದಿ: ಸಮೀಪದ ಹತ್ತರಗಿ ಗ್ರಾಮದ ನೇಕಾರ ಶಂಕರ ವಾಮನ ಶೆಡಿಶ್ಯಾಳಿ (63) ಜೂ. 3ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ಕೈಮಗ್ಗ ಹೊಂದಿದ್ದ ಅವರು, ನೇಕಾರಿಕೆಯನ್ನೇ ಮೂಲ ಕಸಬು ಮಾಡಿಕೊಂಡಿದ್ದರು. ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ನೇಯ್ದ ಸೀರೆಗಳು ಮಾರಾಟವಾಗಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net