

ಮಂಗಳೂರು: ಕರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಾರಿಗೊಳಿಸಿದ ವಾರದ ಲಾಕ್‌ಡೌನ್‌ಗೆ ಮೊದಲ ದಿನವಾದ ಗುರುವಾರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ಮೊದಲಾದ ತಾಲೂಕು ಕೇಂದ್ರಗಳಲ್ಲೂ ಲಾಕ್‌ಡೌನ್ ಯಶಸ್ವಿಯಾಗಿದೆ.
ದಿನಸಿ, ತರಕಾರಿ ಮೊದಲಾದ ಅವಶ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 8ರಿಂದ 11ರ ತನಕ ತೆರೆದಿದ್ದರೂ ಗ್ರಾಹಕರ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ಮೆಡಿಕಲ್‌ಗಳು, ಕೆಲವು ಪೆಟ್ರೋಲ್ ಪಂಪ್‌ಗಳು ತೆರೆದಿದ್ದು, ಜನ ಸಂಚಾರ ಇರಲಿಲ್ಲ. ಬೆಳಗ್ಗೆ ಹಾಲು, ಪತ್ರಿಕೆಗಳ ಮಾರಾಟವೂ ಎಂದಿಗಿಂತ ಇಳಿಕೆಯಾಗಿದೆ. ಬ್ಯಾಂಕ್‌ಗಳು, ಅಗತ್ಯ ಸೇವೆಗಳ ಕಚೇರಿಗಳು, ಕೈಗಾರಿಕೆಗಳು ಚಟುವಟಿಕೆ ನಡೆಸಿದವು.
ರಸ್ತೆಗಳಲ್ಲಿ ಸರಕು ಸಾಗಾಟ ಲಾರಿಗಳು, ಟ್ಯಾಂಕರ್‌ಗಳು ಓಡಾಟ ನಡೆಸಿದವು. ಬೆರಳೆಣಿಕೆ ಸಂಖ್ಯೆಯಲ್ಲಿ ಕಾರು, ದ್ವಿಚಕ್ರ ವಾಹನಗಳು ಸಂಚರಿಸಿದವು. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಿದರು. ಅನವಶ್ಯಕವಾಗಿ ತಿರುಗಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧ್ವನಿವರ್ಧಕದ ಮೂಲಕ ಮನವಿ: ಅವಶ್ಯ ವಸ್ತುಗಳ ಖರೀದಿಗೆ ನೀಡಿದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಸೈರನ್ ಮೊಳಗಿಸಿ, ಧ್ವನಿವರ್ಧಕ ಮೂಲಕ ‘ಅಂಗಡಿ ಬಂದ್ ಮಾಡಿ ಮನೆಗೆ ತೆರಳಿ. ಯಾರೂ ಮನೆಯಿಂದ ಹೊರ ಬರಬೇಡಿ’ ಎಂದು ಮನವಿ ಮಾಡಿದರು.