ಕಾಫಿ ನಾಡಲ್ಲಿ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

web (1)
Published on

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾದ್ಯಂತ ಜಾರಿಯಾಗಿದ್ದ 36 ಗಂಟೆಗಳ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು.

ಹಾಲು, ಹಣ್ಣು, ತರಕಾರಿ, ದಿನಸಿ ಪದಾರ್ಥ ಮಾರಾಟಕ್ಕೆ ಕರ್ಫ್ಯೂನಿಂದ ಸಡಿಲಿಕೆ ಇದ್ದುದರಿಂದ ನಾಗರಿಕರು ಭಾನುವಾರ ಬೆಳಗ್ಗೆ 6ರಿಂದ 8 ಗಂಟೆಯೊಳಗೆ ಆಗಮಿಸಿ ಅಗತ್ಯ ಪದಾರ್ಥಗಳನ್ನು ಖರೀದಿಸಿದರು. ಲಾಕ್​ಡೌನ್, ಕರ್ಫ್ಯೂಗೆ ಇತ್ತೀಚೆಗೆ ಒಗ್ಗಿಕೊಂಡಿರುವ ಜನರಲ್ಲಿ ಕರೊನಾ ಬಗ್ಗೆ ಭಯ ಇರುವುದರಿಂದಲೂ ಸ್ವಯಂಪ್ರೇರಿತರಾಗಿ ಸಹಕರಿಸಿದರು.

ಭಾನುವಾರ ರಜೆ. ಜತೆಗೆ ಕರ್ಫ್ಯೂ ಇದ್ದುದರಿಂದ ಜನಸಂಚಾರವಿಲ್ಲದೆ ನಗರದ ಬೀದಿಗಳು ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ದ್ವಿಚಕ್ರ ವಾಹನಗಳು ಓಡಾಡುತ್ತಿದ್ದವು. ನಗರದ ಅಲ್ಲಲ್ಲಿ ಚೆಕ್​ಪೋಸ್ಟ್​ಗಳಿದ್ದು, ಪೊಲೀಸರು ಕರ್ತವ್ಯದಲ್ಲಿದ್ದರಾದರೂ ಸ್ವಯಂ ಪ್ರೇರಣೆಯಿಂದ ಜನರು ಬೀದಿಗಿಳಿಯದೆ ಇದ್ದ ಕಾರಣಕ್ಕೆ ಪೊಲೀಸರು ಸಹ ಜನರನ್ನು ಪ್ರಶ್ನಿಸುವ ಪ್ರಮೇಯವೂ ಒದಗಲಿಲ್ಲ.

ಬಸ್, ಆಟೋ, ಲಾರಿಗಳು ರಸ್ತೆಗಿಳಿಯದೆ ಬೀದಿಗಳು ಭಣಗುಡುತ್ತಿದ್ದವು. ಬಾಗಿಲು ತೆರೆದು ಗ್ರಾಹಕರಿಗಾಗಿ ಕಾಯುತ್ತಿದ್ದ ಅಂಗಡಿಗಳು ವ್ಯಾಪಾರವಿಲ್ಲದೆ ಕುಳಿತಿರಬೇಕಾಯಿತು. ಸೊಪ್ಪು, ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿಗಳು ಸಹ ಬೀದಿಗಿಳಿದಿರಲಿಲ್ಲ.

ನಗರದ ರಾಮನಹಳ್ಳಿ, ಭುವನೇಶ್ವರಿ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ರತ್ನಗಿರಿ ರಸ್ತೆ, ಹನುಮಂತಪ್ಪ ವೃತ್ತ, ಮಲ್ಲಂದೂರು ರಸ್ತೆ, ಐ.ಜಿ.ರಸ್ತೆ, ಮೂಡಿಗೆರೆ ರಸ್ತೆ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ವೃತ್ತ, ಮಾರ್ಕೆಟ್ ರಸ್ತೆ ಸೇರಿ ನಗರ ಹಾಗೂ ಹೊರವಲಯದ ಎಲ್ಲ ರಸ್ತೆಗಳಲ್ಲಿ ಅಲ್ಲೊಂದು, ಇಲ್ಲೊಂದು ವಾಹನಗಳನ್ನು ಹೊರತುಪಡಿಸಿದರೆ ಇಡೀ ನಗರ ಶಾಂತವಾಗಿತ್ತು. ಎಲ್ಲ ವೃತ್ತಗಳಲ್ಲೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಾರದ ರಜೆ ಕಾರಣಕ್ಕೆ ಕೆಲ ಔಷಧ ಅಂಗಡಿಗಳು ರಜೆ ಮಾಡಿದ್ದವು. ಇನ್ನೂ ಕೆಲವು ಕರ್ಫ್ಯೂ ಕಾರಣಕ್ಕೆ ತೆರೆದಿರಲಿಲ್ಲ. ಪೆಟ್ರೋಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.

ಪೆಟ್ರೋಲ್ ಬಂಕ್​ನಲ್ಲಿ ನಿತ್ಯ ವ್ಯಾಪಾರದ ಶೇ.10ರಷ್ಟೂ ವ್ಯವಹಾರ ನಡೆದಿಲ್ಲ ಎನ್ನುತ್ತಾರೆ ಬಂಕ್ ಕಾರ್ವಿುಕ ದಿನೇಶ್. ಕೆಲವು ದ್ವಿಚಕ್ರ ವಾಹನ ಸವಾರರು ಮಾತ್ರ ಪೆಟ್ರೋಲ್ ಹಾಕಿಸಿಕೊಂಡಿದ್ದರೆ, ಡೀಸೆಲ್ ಅನ್ನು ಕೇಳುವವರೇ ಇರಲಿಲ್ಲ.

ರಂಜಾನ್ ಹಬ್ಬದ ಕಳೆಗಟ್ಟಬೇಕಿದ್ದ ರಸ್ತೆಗಳಲ್ಲಿ ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಖಾಲಿ ಖಾಲಿಯಾಗಿದ್ದವು. ಖಾಲಿ ಇರುವ ರಸ್ತೆಗಳನ್ನು ನೋಡಬೇಕೆಂಬ ಕುತೂಹಲದಿಂದ ಕೆಲವು ಯುವಕರು ಒಬ್ಬೊಬ್ಬರೇ ಓಡಾಡುತ್ತಿದ್ದ ದೃಶ್ಯವೂ ಕಂಡುಬಂತು.

ರಸ್ತೆ ಬಂದ್: ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಎಲ್ಲ ವಹಿವಾಟುಗಳು ಬಂದ್ ಆಗಿದ್ದು ಪ್ರಮುಖಬೀದಿಗಳು ಜನ ಹಾಗೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಆಟೋ, ಟ್ಯಾಕ್ಸಿ, ಸರ್ಕಾರಿ ಬಸ್​ಗಳ ಸೇವೆ ಸ್ಥಗಿತಗೊಂಡಿದ್ದವು. ಮೇ 25ರ ಬೆಳಗ್ಗೆ 7 ಗಂಟೆಯ ತನಕ ಕರ್ಪ್ಯೂ ಜಾರಿಯಲ್ಲಿ ಇರುವುದರಿಂದ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಪ್ರಮುಖ ರಸ್ತೆ ಬಂದ್ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net