ಲಾಕ್‌ಡೌನ್ ಸಂದರ್ಭ ತಿದ್ದುಪಡಿ ಸಲ್ಲ - ಸರ್ಕಾರದ ನಿರ್ಧಾರಕ್ಕೆ ಆರ್‌ಕೆಎಸ್, ಎಸ್‌ಯುಸಿಐ ಜಿಲ್ಲಾ ಸಮಿತಿ ವಿರೋಧ

Raichur RKS Sucic Land Reform Ammendment Act
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದತಿಗೆ ಒತ್ತಾಯಿಸಿ ರಾಯಚೂರಿನ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಆರ್‌ಕೆಎಸ್, ಎಸ್‌ಯುಸಿಐ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ರಾಯಚೂರು: ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದನ್ನು ಕೂಡಲೇ ಹಿಂಪಡೆಯುವಂತೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಹಾಗೂ ರೈತ, ಕೃಷಿ ಕಾರ್ಮಿಕರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಡಿಸಿ ಕಚೇರಿ ಬಳಿ ಮಂಗಳವಾರ ಜಮಾಯಿಸಿದ ಎರಡೂ ಸಂಘಟನೆಗಳ ಪದಾಧಿಕಾರಿಗಳು ಸ್ಥಾನಿಕ ಅಧಿಕಾರಿ ಪ್ರಭಾವತಿಗೆ ಮನವಿ ಸಲ್ಲಿಸಿದರು. ವ್ಯವಸಾಯ ಮಾಡಲು ಆಸಕ್ತಿ ಇರುವವರು ಭೂಮಿ ಖರೀದಿ ಮಾಡಲು ಅನುಕೂಲವಾಗುವಂತೆ ತಿದ್ದುಪಡಿ ತರಲಾಗಿದೆಯೆಂದು ಸರ್ಕಾರ ಹೇಳಿಕೊಂಡಿದೆ. ಈಗಾಗಲೇ ಕೃಷಿ ಮಾಡುತ್ತಿರುವ ರೈತರು ಕೃಷಿ ತ್ಯಜಿಸುತ್ತಿರುವುದೇಕೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಹುಡುಕಿ ಪರಿಹಾರ ಒದಗಿಸುವ ಗೋಜಿಗೆ ಹೋಗಿಲ್ಲ. ಕಾರ್ಪೋರೇಟ್ ಕಂಪನಿ, ಬಂಡವಾಳಗಾರರು, ಅಕ್ರಮ ಹಣ ಗಳಿಸಿದವರಿಗೆ ಕೃಷಿ ಕ್ಷೇತ್ರದಲ್ಲಿ ಪ್ರವೇಶ ಮಾಡಲು ಹಾದಿ ಸುಗಮಗೊಳಿಸಲು ತಿದ್ದುಪಡಿ ಮಾಡಲಾಗಿದೆ ಎಂದು ದೂರಿದರು.

ಕರೊನಾ ಲಾಕ್‌ಡೌನ್ ಸಂದರ್ಭ ದುರುಪಯೋಗ ಪಡಿಸಿಕೊಂಡು ಈ ತಿದ್ದುಪಡಿಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಇಂಥ ಮಹತ್ವದ ಕಾಯ್ದೆಗಳ ತಿದ್ದುಪಡಿ ತಂದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.

ಆರ್‌ಕೆಎಸ್ ಜಿಲ್ಲಾಧ್ಯಕ್ಷ ಎಂ.ರಾಮಣ್ಣ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ್, ಎರಡೂ ಸಂಘಗಳ ಸದಸ್ಯರಾದ ಟಿ.ಪ್ರಮೋದ ಕುಮಾರ್, ಎನ್.ಎಸ್.ವೀರೇಶ್, ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ಉಮಾ ಮಹೇಶ್ವರಿ, ಮಲ್ಲನಗೌಡ, ಆಂಜನೇಯ ಬಿ.ಗಣೇಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net