ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಡೆತ

house
Published on

ಪಿ.ಬಿ ಹರೀಶ್ ರೈ ಮಂಗಳೂರು
ಲಾಕ್‌ಡೌನ್ ಅವಧಿಯಲ್ಲಿ ಸಬ್ ರಿಜಿಸ್ಟ್ರಾರ್(ಉಪ ನೋಂದಣಾಧಿಕಾರಿ) ಕಚೇರಿಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿರುವುದು ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ದಕ್ಷಿಣ ಕನ್ನಡದಲ್ಲಿ 9 ಮತ್ತು ಉಡುಪಿ ಜಿಲ್ಲೆಯಲ್ಲಿ 7 ಕಚೇರಿಗಳಿದ್ದು, ಪ್ರತಿದಿನ ಸುಮಾರು 1.5 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತಿತ್ತು. ಸದ್ಯ ಈ ಆದಾಯದ ಮೂಲ ಸ್ಥಗಿತಗೊಂಡಂತಾಗಿದೆ.

ಕಳೆದ ವರ್ಷ ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ್ದ ರಿಯಲ್ ಎಸ್ಟೇಟ್ ಕೊಂಚ ಚೇತರಿಸಿಕೊಂಡಿತ್ತು. ಈಗ ಮತ್ತೆ ನಗರದಲ್ಲಿ ಆಸ್ತಿ, ಫ್ಲಾೃಟ್, ಅಂಗಡಿ ಕಟ್ಟಡಗಳ ಖರೀದಿ, ಮಾರಾಟ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ ರಿಯಲ್ ಎಸ್ಟೇಟ್ ಉದ್ಯಮ ಆತಂಕ ಎದುರಿಸುವಂತಾಗಿದೆ.

ನಿರ್ಮಾಣ ಕಾಮಗಾರಿಗೆ ತೊಡಕು: ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲಾಗಿದ್ದರೂ ಕಾರ್ಮಿಕರಿಗೆ ವೇತನ ಹಾಗೂ ನಿರ್ಮಾಣ ಕಾಮಗಾರಿ ವಸ್ತುಗಳ ಖರೀದಿಗೆ ಹಣದ ಕೊರತೆ ಉಂಟಾಗಿದೆ. ಆಸ್ತಿ ನೋಂದಣಿ, ಮಾರಾಟಕ್ಕೆ ಅವಕಾಶವಿದ್ದರೆ ಆದಾಯ ಬರುತ್ತದೆ. ಅದನ್ನು ವೇತನ ನೀಡಲು ವಿನಿಯೋಗಿಸಬಹುದು. ಸಬ್ ರಿಜಿಸ್ಟ್ರಾರ್ ಕಚೇರಿ ಬಂದ್ ಇರುವ ಕಾರಣ ಯಾವುದೇ ವ್ಯವಹಾರ ಸಾಧ್ಯವಾಗುತ್ತಿಲ್ಲ ಎನ್ನುವುದು ರಿಯಲ್ ಎಸ್ಟೇಟ್ ಉದ್ಯಮಿಗಳ ಅಭಿಪ್ರಾಯ.

ಅತಿ ಹೆಚ್ಚು ಆದಾಯ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ಮೂರನೇ ಇಲಾಖೆಯಾಗಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಈ ಇಲಾಖೆಗೆ 12,665 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 254 ಸಬ್ ರಿಜಿಸ್ಟ್ರಾರ್ ಕಚೇರಿ ಇದ್ದು, 2020-21ನೇ ಸಾಲಿನಲ್ಲಿ 10,480 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಆಸ್ತಿ ಖರೀದಿ, ಮಾರಾಟ ವ್ಯವಹಾರ ಸ್ಥಗಿತಗೊಂಡರೆ ನಿರ್ಮಾಣ ಕ್ಷೇತ್ರಕ್ಕೆ ಮಾತ್ರವಲ್ಲ ಸರ್ಕಾರಕ್ಕೂ ನಷ್ಟ. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿರುವಾಗ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಬಂದ್ ಮಾಡಿರುವುದು ಸರಿಯಲ್ಲ. ಶೇ.50ರಷ್ಟು ಕಚೇರಿ ನಿರ್ವಹಣೆಗೆ ಅವಕಾಶ ನೀಡಬೇಕು. ಕೆಲವು ಮಾರ್ಗಸೂಚಿ ಅಳವಡಿಸಿ ಈ ಕಚೇರಿ ತೆರೆಯಲು ಅನುಮತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು.
ಪುಷ್ಪರಾಜ್ ಜೈನ್ ಅಧ್ಯಕ್ಷರು, ಕ್ರೆಡೈ ಮಂಗಳೂರು

ಆಸ್ತಿ ಖರೀದಿ ಹಾಗೂ ಮಾರಾಟ ಸಂಬಂಧಿಸಿ ಮಾತುಕತೆ ನಡೆದು ನೋಂದಣಿಗೆ ದಿನ ನಿಗದಿಯಾಗಿರುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಟೋಕನ್ ಪಡೆದವರಿದ್ದಾರೆ. ದಿಢೀರ್ ನೊಂದಣಿ ಕಚೇರಿ ಸ್ಥಗಿತಗೊಂಡ ಕಾರಣ ಸಾಕಷ್ಟು ಜನ ತೊಂದರೆ ಅನುಭವಿಸಿದ್ದಾರೆ. 14 ದಿನಗಳ ಬಳಿಕ ಏನಾಗಬಹುದು ಎಂಬ ಆತಂಕವೂ ಇದೆ. ನಿಯಮಗಳನ್ನು ಅಳವಡಿಸಿ ಕಚೇರಿ ತೆರೆಯಲು ಅನುಮತಿ ನೀಡಬಹುದು. ಜನಸಂದಣಿ ಕಡಿಮೆ ಮಾಡಲು ಪ್ರತಿದಿನ ನಿಗದಿತ ಜನರಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಬೇಕು.
ಪ್ರಸಾದ್ ಕುಮಾರ್ ವಕೀಲರು, ಮಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net