ಕೋವಿಡ್-19ರ ಅಪಾಯದಿಂದ ಪಾರಾಗಿ ಹಸಿರು ವಲಯಕ್ಕೆ ಸೇರಿರುವ ಕೋಲಾರ ಸಹಜ ಸ್ಥಿತಿಯತ್ತ

5-klr-17
Published on

ಕೋಲಾರ: ಕೋವಿಡ್-19ರ ಅಪಾಯದಿಂದ ಪಾರಾಗಿ ಹಸಿರು ವಲಯಕ್ಕೆ ಸೇರಿರುವ ಕೋಲಾರ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಲಿಕೆ ನಂತರ ಜನ ಜೀವನ ಯಥಾಸ್ಥಿತಿಗೆ ಮರಳಿದಂತಾಗಿದೆ.

ಹಾಗೆ ನೋಡಿದರೆ 43 ದಿನಗಳ ಲಾಕ್‌ಡೌನ್ ವೇಳೆಯೂ ಗುಂಡು-ತುಂಡಿಗಾಗಿ ಅಲೆದಾಡಿದ್ದ ವ್ಯಸನಿಗಳು ರಿಯಾಯಿತಿ ಸಿಕ್ಕ ಮೇಲೆ ರಾಜಾರೋಷವಾಗಿ ಬಯಕೆ ತೀರಿಸಿಕೊಳ್ಳುತ್ತಿದ್ದಾರೆ.

ದೇವರು, ಧರ್ಮದ ಬಗ್ಗೆ ನಂಬಿಕೆಯುಳ್ಳವರು ಮಂದಿರ, ಮಸೀದಿ, ಚರ್ಚ್ ಬಾಗಿಲು ತೆಗೆಯುವದನ್ನು ಕಾಯುತ್ತಿದ್ದಾರೆ, ಲಾಕ್‌ಡೌನ್‌ನಿಂದ ಗಡ್ಡ, ಜುಟ್ಟು ಬೆಳೆಸಿಕೊಂಡಿರುವ ಸಾವಿರಾರು ಜನ ಸಲೂನ್ ಆರಂಭಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಪಾರ್ಸಲ್ ಇಷ್ಟಪಡದ ಸವಿರುಚಿ ಪ್ರಿಯರು ಹೋಟೆಲ್ ಬೇಗನೆ ಓಪನ್ ಆಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕರೊನಾ ತಡೆಯಲು ಹಗಲು, ರಾತ್ರಿ ಶ್ರಮಿಸಿರುವ ಪೊಲೀಸರು, ಗೃಹ ರಕ್ಷಕ ದಳದವರು ಕೊಂಚ ರಿಲ್ಯಾಕ್ಸ್ ಆಗಿದ್ದರೆ, ವೈದ್ಯರು, ಆಶಾ ಕಾರ್ಯಕರ್ತೆಯರು ಎಂದಿನಂತೆ ಕಾಯಕದಲ್ಲಿ ನಿರತರಾಗಿದ್ದಾರೆ. ನರಸಾಪುರ, ವೇಮಗಲ್, ಮಾಲೂರು, ಕೆಜಿಎಫ್ ಇನ್ನಿತರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು ನಾಲ್ಕುಗೋಡೆಗಳಿಂದ ಹೊರ ಬಂದು ಮತ್ತೆ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಕರೊನಾದಿಂದ ಪರಿಸರ ಮಾಲಿನ್ಯ ಶೇ.70 ಕಡಿಮೆಯಾಗಿತ್ತು. ಲಾಕ್‌ಡೌನ್ ಸಡಲಿಕೆಯಿಂದ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದಂತೆ ಪರಿಸರದ ಮೇಲೆ ಗಾಢ ಪರಿಣಾಮ ಬೀರಿದೆ. ವೈರಸ್ ಭಯದೊಂದಿಗೆ ಹೊಗೆಯಿಂದ ಹೇಗೆ ಪಾರಾಗಬೇಕೆಂಬ ಚಿಂತೆ ಜನರನ್ನು ಕಾಡಲಾರಂಭಿಸಿದೆ.

ಪಾನ್ ಪರಾಗ್, ಗುಟ್ಕಾ, ಹನ್ಸ್ ಸೇವನೆ ನಿಯಂತ್ರಣದಿಂದ ಜಿಲ್ಲೆಯಾದ್ಯಂತ ಉಗಳುವಿಕೆ ಕಡಿಮೆ ಆಗಿತ್ತು, ಈಗ ಹಸಿರು ವಲಯಗಳು ಚಿತ್ತಾರಗಳಿಂದ ಗಬ್ಬು ನಾರುತ್ತಿವೆ.

ಸಾಮಾಜಿಕ ಅಂತರಕ್ಕೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ, ವಾಹನ ಚಾಲಕರು ಮಾಸ್ಕ್ ಧರಿಸದೆ ಉದ್ಧಟತನ ತೋರುತ್ತಿದ್ದಾರೆ, ಪಾದಚಾರಿಗಳ ರಸ್ತೆ ಮತ್ತೆ ಒತ್ತುವರಿಯಾಗಿದೆ, ವಾಣಿಜ್ಯ ಕೇಂದ್ರಗಳಾದ ಎಂಜಿ ರಸ್ತೆ, ಎಂಬಿ ರಸ್ತೆ, ಬ್ರಾಹ್ಮಣರ ಬೀದಿ, ಕಾಳಿಕಾಂಬ ರಸ್ತೆ, ಅಮ್ಮವಾರಿ ಪೇಟೆ, ಮೆಕ್ಕೆ ವೃತ್ತ, ಡೂಮ್ ಲೈಟ್ ವೃತ್ತದಲ್ಲಿ ಎಂದಿನಂತೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಾಯು, ಶಬ್ಧ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸೂಚನೆ ವ್ಯಕ್ತವಾಗಿದೆ.

ಮಂಗಳವಾರ ಜಿಲ್ಲೆಯಲ್ಲಿ ಮದ್ಯ ಮಾರಾಟ ಎಂದಿನಂತೆ ನಡೆಯಿತು, ಹೊಸ ಸ್ಟಾಕ್ ಬಂದಿದ್ದರಿಂದ ವ್ಯಾಪಾರ ಜೋರಾಗಿಯೇ ನಡೆಯಿತು, ಸೋಮವಾರಕ್ಕೆ ಹೋಲಿಸಿದರೆ ಜನ ಸಂದಣಿ ಅಷ್ಟಾಗಿ ಕಾಡಲಿಲ್ಲ, ಒಟ್ಟಿನಲ್ಲಿ ಮೌನವಾಗಿದ್ದ ಜಿಲ್ಲೆ ಮತ್ತೆ ಗಜಿಬಿಜಿಗೆ ತುತ್ತಾಗಿದ್ದು ಕರೊನಾ ಹೆಮ್ಮಾರಿಯಾಗಿ ಕಾಡದಿರಲಿ ಎಂಬುದು ಆರೋಗ್ಯವಂತ ಸಮಾಜಕ್ಕಾಗಿ ಹಂಬಲಿಸುತ್ತಿರುವವರ ಕಾಳಜಿಯಾಗಿದೆ.

ಬಸ್ ಸಂಚಾರ

ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಸಂಚಾರ ಆರಂಭಿಸಿರುವ ಕೆಎಸ್‌ಆರ್‌ಟಿಸಿ ಐದು ಡಿಪೋ ವ್ಯಾಪ್ತಿಯಲ್ಲಿ ಮಂಗಳವಾರ ಒಟ್ಟು 30 ಬಸ್‌ಗಳ ಓಡಾಟ ಮಾಡಿದ್ದು 1200 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕ ನಡುವೆ ದೈಹಿಕ ಅಂತರ ಕಾಪಾಡುವುದು, ಕೈಗೆ ಸ್ಯಾನಿಟೈಸರ್ ಬಳಸಿದ ನಂತರ ಪ್ರಯಾಣಿಕರ ಮೊಬೈಲ್ ಸಂಖ್ಯೆಇನ್ನಿತರ ಮಾಹಿತಿ ಪಡೆದು ಬಸ್ ಹತ್ತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net