

ಕೋಲಾರ: ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳ ಕೈಗಾರಿಕೆಗಳನ್ನು ಹೊರತುಪಡಿಸಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಕರೊನಾ ಲಾಕ್‌ಡೌನ್‌ನಿಂದ ಮುಕ್ತಿ ಪಡೆದುಕೊಂಡಿವೆ.
ಕೋಲಾರ ಜಿಲ್ಲೆ ಹಸಿರು ವಲಯದ ಪಟ್ಟಿಗೆ ಒಳಪಟ್ಟಿರುವುದರಿಂದ ಲಾಕ್‌ಡೌನ್ ಸಡಿಲಿಸಿ ಕೈಗಾರಿಕೆಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸಬೇಕೆಂಬ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮಂಗಳವಾರ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ, ಉತ್ಪಾದನೆ ಆರಂಭಕ್ಕೆ ಕೈಗೊಂಡಿರುವ ಸಿದ್ಧತೆಗಳ ಮಾಹಿತಿ ಸಂಗ್ರಹಿಸಿದರು.
ಹಾಲಿ ಇರುವ ಕಾರ್ಮಿಕರಲ್ಲಿ ಶೇ.50 ಬಳಕೆ ಮಾಡಿಕೊಂಡು ಉತ್ಪಾದನೆಗೆ ಚಾಲನೆ ನೀಡಬಹುದು, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕರಿಗೆ ಪ್ರತಿದಿನ ಆರೋಗ್ಯ ತಪಾಸಣೆ ಮಾಡಿಸಬೇಕು. ಹೊರಗಿನವರನ್ನು ಕರೆತಂದು ಕೆಲಸ ಮಾಡಿಸಬಾರದು, ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು, ಹೊರ ಜಿಲ್ಲೆಗಳಿಂದ ಬರುವ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿಟ್ಟು ಕರೊನಾ ಪರೀಕ್ಷೆ ನಡೆಸಿ ವರದಿ ಬಂದ ನಂತರವೇ ಕೆಲಸಕ್ಕೆ ಕರೆಸಿಕೊಳ್ಳಬಹುದು. ಆ ನಂತರ ಕೋವಿಡ್ ಸಮಸ್ಯೆ ಪರಿಹಾರವಾಗುವವರೆಗೆ ಅಂದರೆ ಸರ್ಕಾರದ ಮುಂದಿನ ಆದೇಶದವರೆಗೆ ಕಾರ್ಮಿಕರನ್ನು ಊರಿಗೆ ಕಳುಹಿಸುವಂತಿಲ್ಲ ಎಂದರು.
ಹಸಿರು ವಲಯ ಉಳಿಸಿಕೊಳ್ಳೋಣ: ಕೋಲಾರವನ್ನು ಹಸಿರು ಜಿಲ್ಲೆ ಎಂದು ಸರ್ಕಾರ ಘೋಷಿಸಿದೆ. ಇದಕ್ಕೆ ಚ್ಯುತಿ ಬರದಂತೆ ಎಚ್ಚರಿಕೆ ವಹಿಸೋಣ. ಈ ಕಾರ್ಯದಲ್ಲಿ ಕೈಗಾರಿಕೋದ್ಯಮಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕರೋನಾಮುಕ್ತ ಜಿಲ್ಲೆಯಾಗಲು ಸಹಕಾರವಿದೆ, ಪೊಲೀಸರು, ಅಧಿಕಾರಿ, ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿ ಅನೇಕರ ಪರಿಶ್ರಮವಿದೆ. ಅವರ ಸೇವೆಯನ್ನು ಗೌರವಿಸೋಣ, ಜಿಲ್ಲೆಗೆ ಸೋಂಕು ನುಸುಳದಂತೆ ಅಗತ್ಯ ಎಚ್ಚರಿಕೆ ವಹಿಸೋಣ ಎಂದರು.
ಜಿಲ್ಲೆಯ ಕೈಗಾರಿಕೆಗಳು ಸಿಎಸ್‌ಆರ್ ನಿಧಿಯನ್ನು ಯಾವ್ಯಾವುದೋ ಕಾರ್ಯಕ್ಕೆ ಬಳಸುವ ಬದಲಿಗೆ ಕೆರೆಗಳ ಹೂಳೆತ್ತಲು ಬಳಸುವಂತೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಎನ್.ರವಿಚಂದ್ರ, ಸಹಾಯಕ ನಿರ್ದೇಶಕ ವೆಂಕಟರಮಣ, ಶಾಹಿ ಗಾರ್ಮೆಂಟ್ಸ್‌ನ ಪ್ರತಿನಿಧಿಗಳಾದ ಎಲ್.ರಘುರಾಜ್, ಶಿವಕುಮಾರ್, ಶಿವಂ ಕಂಪನಿಯ ರಂಗನಾಥ್, ಮಿಟ್ಸುಬಿಷಿ ಕಂಪನಿಯ ಯತಿರಾಜ್, ಕೈಗಾರಿಕಾ ಒಕ್ಕೂಟದ ಮಹಮದ್ ಷಫಿಉಲ್ಲಾ, ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.