ತುಮಕೂರು ಜಿಲ್ಲೆಯ 8 ತಾಲೂಕುಗಳಲ್ಲಿ ಲಾಕ್ ತೆರವಾಗದು

30Tmk_Corona_Emergency
Published on

ತುಮಕೂರು: ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ 8 ತಾಲೂಕುಗಳಲ್ಲಿ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ.

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಕುರಿತು ಗುರುವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಲಾಕ್‌ಡೌನ್ ಸಡಿಲಗೊಳಿಸಿರುವ ತಾಲೂಕುಗಳಲ್ಲಿ ಒಂದು ದಿನ ಬಿಟ್ಟು ಒಂದು ದಿನ ಅಂಗಡಿ ತೆರೆಯಲು ವರ್ತಕರ ಸಂಘದೊಂದಿಗೆ ಚರ್ಚಿಸಿ ಅಂಗಡಿ ತೆರೆಯಬಹುದು. ಆದರೆ ಬಹಳ ಜನ ಒಂದೇ ಕಡೆ ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮಾಧುಸ್ವಾಮಿ ಸೂಚಿಸಿದರು.

ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ್ದು, ಜಿಲ್ಲೆಯ ಉಳಿದ 8 ತಾಲೂಕುಗಳಲ್ಲಿ ಮೇ 3ರವರೆಗೆ ಲಾಕ್‌ಡೌನ್ ಕಟ್ಟುನಿಟ್ಟಾಗಿರಲಿದೆ. ಆನಂತರ ಪ್ರಧಾನಮಂತ್ರಿ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೂ, ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಮುಂದುವರಿಸಿ ಎಂದು ಸಲಹೆಯಿತ್ತರು.

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ, ನರೇಗಾ ಕಾಮಗಾರಿ, ಗ್ರಾಮೀಣ ಸಣ್ಣ ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ಹಣ್ಣು, ತರಕಾರಿಗಳ ವಿಲೇವಾರಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯುವುದು ಹಾಗೂ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಆಯಾ ಕ್ಷೇತ್ರದ ಶಾಸಕರ ಸಲಹೆ ಮೇರೆಗೆ ಸಡಿಲಿಕೆ ಹಾಗೂ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಸಂಸದರಾದ ಜಿ.ಎಸ್.ಬಸವರಾಜು, ಡಿ.ಕೆ.ಸುರೇಶ್, ಶಾಸಕರಾದ ಬಿ.ಜಿ.ಜ್ಯೋತಿಗಣೇಶ್, ಡಾ.ಎಚ್. ಡಿ.ರಂಗನಾಥ್, ಮಸಾಲಜಯರಾಂ, ಬಿ.ಸಿ.ನಾಗೇಶ್, ಎಂ.ವಿ.ವೀರಭದ್ರಯ್ಯ, ಬಿ.ಸತ್ಯನಾರಾಯಣ, ವಿಧಾನಪರಿಷತ್ ಸದಸ್ಯ ಎಚ್.ಡಿ.ತಿಪ್ಪೇಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್ಪಿ ಡಾ.ಕೆ. ವಂಶಿಕೃಷ್ಣ, ಜಿಪಂ ಸಿಇಒ ಶುಭಾ ಕಲ್ಯಾಣ್, ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ , ಜಿಲ್ಲಾ ಆರೋಗ್ಯಾಧಿಕಾರಿ ಬಿ.ಆರ್.ಚಂದ್ರಿಕಾ ಇದ್ದರು.

ಕೈಗಾರಿಕೋದ್ಯಮಿಗಳ ಸಭೆ: ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೈಗೋರಿಕೋದ್ಯಮಿಗಳ ಸಭೆ ನಡೆಸಿದ ಮಾಧುಸ್ವಾಮಿ, ಕೈಗಾರಿಕೆಗಳನ್ನು ಆರಂಭಿಸಲು ಇರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಕೈಗಾರಿಕಾ ಪ್ರದೇಶಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಾರಿಕೆಗಳನ್ನು ನಡೆಸಲು ಉದ್ಯಮಿಗಳು ಮುಂದಾಗಬೇಕು ಎಂದು ಸಲಹೆಯಿತ್ತರು.

ಸೋಂಕಿನ ಮೂಲ ಪತ್ತೆಯಾಗಿಲ್ಲ !: ಕರೊನಾ ಸೋಂಕಿನಿಂದ ತುಮಕೂರಲ್ಲಿ ಸಾವನ್ನಪ್ಪಿದ 74 ವರ್ಷ ವೃದ್ಧನಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಸೋಂಕಿನ ಮೂಲ ಪತ್ತೆ ಹಚ್ಚುವುದು ಕಷ್ಟವೆನಿಸಿದೆ. ಹಾಗಾಗಿ, ತುಮಕೂರಿನಲ್ಲಿ ಮೇ 3ರವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಕುಡಿವ ನೀರಿಗೆ ಹಣದ ಸಮಸ್ಯೆ ಇಲ್ಲ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸಲು ಹಣದ ಕೊರತೆ ಇಲ್ಲ. ಆದರೆ, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಲ್ಲಿ ಒಟ್ಟಾರೆ 10 ಕೋಟಿ ಹಣವಿದೆ. ಇದನ್ನು ಕಾಲಕಾಲಕ್ಕೆ ಅವಶ್ಯಕತೆ ಹಾಗೂ ಅನಿವಾರ್ಯವಿದ್ದಲ್ಲಿ ಬಳಸಿಕೊಳ್ಳಲಾಗುತ್ತದೆ. ಕರೊನಾ ಸೋಂಕು ತಡೆ ಗಟ್ಟುವ ಕಾರ್ಯಕ್ರಮಗಳಿಗೆ ಹಣಕಾಸಿನ ಕೊರತೆ ಇಲ್ಲ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net