

ತುಮಕೂರು: ಕರೊನಾ ವಿರುದ್ಧದ ಸಮರ ಮುಂದುವರಿದಿದೆ. ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ 2.0 ಇಂದಿನಿಂದ ಇನ್ನಷ್ಟು ಕಠಿಣವಾಗಿರಲಿದೆ.
ಏ.14ಕ್ಕೆ ಮೊದಲ ಹಂತದ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು 2ನೇ ಹಂತದಲ್ಲಿ ಅಸಡ್ಡೆ ತೋರುವವರಿಗೆ ಜಿಲ್ಲಾಡಳಿತ ಶಿಸ್ತು ಕ್ರಮ ಜರುಗಿಸಲಿದೆ. ಹೊರ ರಾಜ್ಯಗಳು, ಹಾಟ್‌ಸ್ಪಾಟ್ ಜಿಲ್ಲೆಗಳು, ತಾಲೂಕುಗಳಿಂದ ಬಂದಿರುವರ ಮೇಲೆ ತೀವ್ರ ನಿಗಾವಹಿಸಲಾಗಿದ್ದು ವಿಲೇಜ್ ಟಾಸ್ಕ್ ಫೋರ್ಸ್‌ಗಳು ಮತ್ತಷ್ಟು ಚುರುಕಾಗಲಿವೆ.
ಮಹಾಮಾರಿ ಹರಡದಂತೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸೋಂಕು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ತುಮಕೂರು ದೇಶಕ್ಕೆ ಮಾದರಿ ಎನಿಸಿತ್ತು. ಈ ಹಿನ್ನೆಲೆಯಲ್ಲಿ 2ನೇ ಹಂತದ ಲಾಕ್‌ಡೌನ್ ಅನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಮೊಬೈಲ್ ಸ್ಕ್ವಾಡ್ : ತಾಲೂಕುಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ನಿರ್ದೇಶಿಸಲಾಗಿದೆ. ಸಾರ್ವಜನಿಕರು ಲಾಕ್‌ಡೌನ್ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಪ್ರತೀ ತಾಲೂಕುಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ 5-6 ತಂಡಗಳ ಮೊಬೈಲ್ ಸ್ಕ್ವಾಡ್‌ಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಲಾಕ್‌ಡೌನ್ ಉಲ್ಲಂಸುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದು. ಮೀತಿ ಮೀರಿದರೆ ಪ್ರಕರಣ ದಾಖಲಿಸುವಂತೆ ಮೊಬೈಲ್ ಸ್ಕ್ವಾಡ್‌ಗೆ ಸೂಚಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ವಿಲೇಜ್ ಟಾಸ್ಕ್ ಪೋರ್ಸ್ ಇನ್ನಷ್ಟು ಚುರುಕುಗೊಳಿಸಲಾಗುವುದು. ಹೊರರಾಜ್ಯ ಅಥವಾ ಹಾಟ್‌ಸ್ಪಾಟ್ ಜಿಲ್ಲೆ, ತಾಲೂಕುಗಳ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ಇದ್ದರೂ ಲಾಕ್‌ಡೌನ್ ಉಲ್ಲಂಘಿಸಿ ಸಣ್ಣ ಪುಟ್ಟ ರಸ್ತೆಗಳ ಮುಖಾಂತರ ಜನರು ಗ್ರಾಮಗಳಿಗೆ ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆವಹಿಸಬೇಕಿದೆ ಎಂದರು.
ವಿಲೇಜ್ ಟಾಸ್ಕ್ ಪೋರ್ಸ್ ಸನ್ನದ್ಧ: ಪ್ರತಿ ಗ್ರಾಮಗಳಲ್ಲಿ ಹೊರ ರಾಜ್ಯಗಳು, ಹಾಟ್‌ಸ್ಪಾಟ್ ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಮೇಲೆ ನಿಗಾವಹಿಸಿ ಅಂತಹವರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲು ವಿಲೇಜ್ ಟಾಸ್ಕ್‌ಪೋರ್ಸ್‌ಗೆ ಸೂಚಿಸಲಾಗಿದೆ. ಅಂತಹವರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಿ, ಅವರ ಮೆಡಿಕಲ್ ಸ್ಕ್ರೀನಿಂಗ್ ಮಾಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.
ಶಿರಾ ತಾಲೂಕಿನಲ್ಲಿ ಮುನ್ನೆಚ್ಚರಿಕೆಯಾಗಿ ಕರೊನಾದಿಂದ ಬಲಿಯಾದ ವೃದ್ಧ ವಾಸವಿದ್ದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿರುವ ರೋಗಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಡಾ.ಕೆ.ರಾಕೇಶ್ ಕುಮಾರ್ ಡಿಸಿ