

ಉಡುಪಿ: ಜಿಲ್ಲೆಯಲ್ಲಿ ಮೇ3ರ ತನಕ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದೆ. ಆರ್ಥಿಕ ಸುಧಾರಣೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು, ಸಾರ್ವಜನಿಕರು ಬೇಕಾಬಿಟ್ಟಿ ಓಡಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಂಗಳವಾರ ಮಂಗಳವಾರದ ವಿಡಿಯೋ ಸಂದೇಶದಲ್ಲಿ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆ ಹಸಿರು ವಲಯದ ನಿರೀಕ್ಷೆಯಲ್ಲಿದೆ. ನಮ್ಮಲ್ಲಿ ಕೊನೆಯ ಪ್ರಕರಣ ದಾಖಲಾಗಿ 30 ದಿನಗಳು ಕಳೆದಿವೆ. ಕೇಂದ್ರ ಸರ್ಕಾರ ಮುಂದಿನ ವಲಯವಾರು ಪಟ್ಟಿಯಲ್ಲಿ ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರ್ಪಡೆಗೊಳಿಸುವ ನಿರೀಕ್ಷೆ ಇದೆ. ಈಗಾಗಲೇ ನಮ್ಮಲ್ಲಿ ಹಸಿರು ವಲಯಕ್ಕೆ ಇರುವ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶವಿದೆ. ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ಆರಂಭಗೊಳ್ಳಲಿದೆ. ಕಲ್ಲು, ಮರಳು, ಜಲ್ಲಿ ಮೊದಲಾದ ವಸ್ತುಗಳ ಪೂರೈಕೆ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಚಟುವಟಿಕೆಗೆ ಅವಕಾಶವಿದೆ. ಸಂಬಂಧಪಟ್ಟವರು ಓಡಾಡುವಾಗ ಸಂಸ್ಥೆಯ, ಪೂರಕ ವೃತ್ತಿಗೆ ಸಂಬಂಧಿಸಿ ಗುರುತಿನ ಚೀಟಿ, ದಾಖಲೆಗಳನ್ನು ಪೊಲೀಸರಿಗೆ ತೋರಿಸಬೇಕು.
11 ಗಂಟೆವರೆಗೆ ದಿನಸಿ ಅಂಗಡಿ: ದಿನಸಿ ಅಂಗಡಿಗಳನ್ನು ಬೆಳಗ್ಗೆ 7ರಿಂದ 11ರತನಕ ಮಾತ್ರ ತೆರೆಯಬೇಕು. ವ್ಯಾಪಾರ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಹಾಕದಿರುವ ಬಗ್ಗೆ ಗಮನಕ್ಕೆ ಬಂದರೆ ಮಾಲೀಕರು, ಸಿಬ್ಬಂದಿ ಮೇಲೆ ಕೇಸು ಹಾಕುತ್ತೇವೆ ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ನಿಗಾ ಇಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಸಿಂಗಲ್, ಮಲ್ಟಿ ಬ್ರಾೃಂಡ್ ಶಾಪ್‌ಗಳು, ಚಿನ್ನದ ಮಳಿಗೆಗಳು ಸಲೂನ್ ಮತ್ತು ಬ್ಯೂಟಿ ಪಾರ್ಲರ್‌ಗಳಿಗೆ ಅವಕಾಶವಿಲ್ಲ, ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ.
ಸಾರ್ವಜನಿಕ ಸಾರಿಗೆ ಸೇವೆಗೆ ಇನ್ನೂ ಅವಕಾಶ ನೀಡಿಲ್ಲ. ಅನವಶ್ಯಕವಾಗಿ ಓಡಾಟ ನಡೆಸಿದರೆ ವಾಹನ ವಶಕ್ಕೆ ಪಡೆಯಲಾಗುವುದು. 750ಕ್ಕೂ ಅಧಿಕ ಬೇರೆ ಬೇರೆ ರೀತಿಯ ವಾಹನಗಳನ್ನು ಸೀಝ್ ಮಾಡಲಾಗಿದೆ. ಪೊಲೀಸ್ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ. ಜಿ.ಜಗದೀಶ್ ಉಡುಪಿ ಜಿಲ್ಲಾಧಿಕಾರಿ