ಕರೊನಾ ಟೆಸ್ಟ್ ರಾಜ್ಯದಲ್ಲೇ ಉಡುಪಿ ಪ್ರಥಮ

carona logo
Published on

ಉಡುಪಿ: ಜಿಲ್ಲೆಯಲ್ಲಿ 11,77,361 ಜನಸಂಖ್ಯೆ ಇದ್ದು, 409 ಮಂದಿಯ ಗಂಟಲಿನ ಸ್ರಾವ ಮಾದರಿ ಪಡೆದು ಪರೀಕ್ಷೆಗೊಳಪಡಿಸಲಾಗಿದೆ. ಸರಾಸರಿ ಆಧಾರದಲ್ಲಿ 1 ಲಕ್ಷ ಜನರಲ್ಲಿ 65 ಮಂದಿಯನ್ನು ಪರೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

409 ಮಂದಿಯಲ್ಲಿ 394 ವರದಿಗಳು ನೆಗೆಟಿವ್ ಬಂದಿದೆ, 15 ವರದಿ ಬಾಕಿ ಇದೆ. ಕರೊನಾ ಪಾಸಿಟಿವ್ ನಿಕಟ ಸಂಪರ್ಕ ಹೊಂದಿದವರು, 2ನೇ ಹಂತದ ಸಂಪರ್ಕ ಹೊಂದಿದವರು, ತೀವ್ರ ಶ್ವಾಸಕೋಶ ಸೋಂಕಿಗೆ ಒಳಗಾದವರನ್ನು ಹುಡುಕಿ ತಪಾಸಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 19 ದಿನಗಳಿಂದ ಕರೊನಾ ಪಾಸಿಟಿವ್ ಕಂಡು ಬಂದಿಲ್ಲ. 28 ದಿನಗಳಾದರೆ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯ ಒಳಗೆ ಕರೊನಾ ಕಂಡು ಬರುವ ಸಾಧ್ಯತೆಗಳು ಕಡಿಮೆ ಇದೆ. ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಗಡಿಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಗರ್ಭಿಣಿ ಆರೋಗ್ಯ ಸುಧಾರಣೆ: ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಬಿಡುಗಡೆಯಾಗಿದ್ದು, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ 2ನೇ ಮಾದರಿ ನೆಗೆಟಿವ್ ಬಂದಿದೆ. ಇನ್ನೊಂದು ವರದಿ ನೆಗೆಟಿವ್ ಬಂದರೆ ಕೂಡಲೇ ಡಿಸ್ಚಾರ್ಜ್ ಮಾಡುತ್ತೇವೆ. ಭಟ್ಕಳದಿಂದ ಹೆಚ್ಚಿನ ಚಿಕಿತ್ಸೆಗೆ ಇಲ್ಲಿಗೆ ಆಗಮಿಸಿದ ಗರ್ಭಿಣೆ ಮಹಿಳೆ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಈಕೆಯ ಗಂಟಲು ದ್ರವ ಮಾದರಿ ಗುರುವಾರ ಕಳುಹಿಸಲಾಗಿದೆ. ಇನ್ನೊಂದು ವರದಿ ನೋಡಿ 2-3 ದಿನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಡಿಸಿ ತಿಳಿಸಿದರು.

225 ವರದಿ ನೆಗೆಟಿವ್: ಜಿಲ್ಲಾಡಳಿತ ಶುಕ್ರವಾರ ಸ್ವೀಕರಿಸಿದ ಎಲ್ಲ 225 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ.

ಕೊವಿಡ್ -19 ಸೋಂಕಿತರ ಸಂಪರ್ಕವಾದ ಒಬ್ಬರು, ಇಲ್‌ನೆಸ್‌ಗೆ ಸಂಬಂಧಿಸಿ ನಾಲ್ವರು, ಇತರೆ ಹಾಟ್‌ಸ್ಪಾಟ್‌ಗಳಿಂದ ಬಂದವರು 12 ಮಂದಿ ಸೇರಿದಂತೆ ಒಟ್ಟು 18 ಮಂದಿಯ ಮಾದರಿಯನ್ನು ಶುಕ್ರವಾರ ಸಂಗ್ರಹಿಸಲಾಗಿದ್ದು, 13 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 202 ಮಂದಿಯ ವರದಿ ಬರಲು ಬಾಕಿ ಇದೆ. ಶುಕ್ರವಾರಕ್ಕೆ 167 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 8 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net