

ಮಂಗಳೂರು: ರಾಜ್ಯದ ಕೃಷಿಕರಿಗೆ ಮುಂಗಾರಿಗೆ ಅಗತ್ಯವಿರುವ ಯೂರಿಯಾ ರಸಗೊಬ್ಬರ ಪೂರೈಕೆ ಮಾಡುವ ಪ್ರಮುಖ ಕಂಪನಿ ಎಂಸಿಎಫ್ ಈ ಬಾರಿ ವಾರ್ಷಿಕ ಷಟ್‌ಡೌನ್ ಮುಗಿಸಿ, ಪುನಾರಂಭ ವಿಳಂಬವಾಗಿದೆ. ಹಾಗಾಗಿ ರೈತರಿಗೆ ರಸಗೊಬ್ಬರ ಪೂರೈಕೆಯೂ ವಿಳಂಬಗೊಳ್ಳುವ ಸಾಧ್ಯತೆಗಳಿವೆ.
ಫೆ.27ರಿಂದಲೇ ಷಟ್‌ಡೌನ್‌ಗೆ ಹೋಗಿದ್ದ ಕಂಪನಿ ಮಾರ್ಚ್ 27-28 ಆಗಿ ಕಾರ್ಯಾರಂಭಿಸಿ, ಏಪ್ರಿಲ್ 1-2ರ ವೇಳೆಗೆ ಯೂರಿಯಾ ಉತ್ಪಾದನೆ ಶುರು ಮಾಡಬೇಕಿತ್ತು. ಆದರೆ ಕರೊನಾ ಲಾಕ್‌ಡೌನ್‌ನಿಂದಾಗಿ ರಸಗೊಬ್ಬರ ಉತ್ಪಾದನೆ ಮಾಡಬೇಕೇ ಬೇಡವೇ ಎಂಬ ಸಂದಿಗ್ಧತೆಯಲ್ಲಿದ್ದ ಕಂಪನಿ ಆಡಳಿತ ಕೊನೆಗೂ ಇಂದು(ಬುಧವಾರ)ರಾತ್ರಿ ಬಾಯ್ಲರ್ ಕೆಲಸ ಶುರು ಮಾಡಿದೆ.
ಶಟ್‌ಡೌನ್ ಸಂದರ್ಭದಲ್ಲಿ ಸಬ್ಸಿಡಿ ಇರುವ ಯೂರಿಯಾ ಉತ್ಪಾದನೆ ಸ್ಥಗಿತಗೊಂಡಿದ್ದು, ಸಬ್ಸಿಡಿರಹಿತ ರಸಗೊಬ್ಬರ ಡೈ ಅಮೋನಿಯಂ ಫಾಸ್ಪೇಟ್(ಡಿಎಪಿ) ಮಾತ್ರ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಮುಂದುವರಿಸಲಾಗಿದೆ.
ಬಾಯ್ಲರ್ ಕಾರ್ಯಾರಂಭಗೊಳಿಸಿ, ರಸಗೊಬ್ಬರ ಉತ್ಪಾದನೆ ಮಾಡಬೇಕಾದರೆ ಒಂದು ವಾರವಾದರೂ ಬೇಕಾಗುತ್ತದೆ. ಹಾಗಾಗಿ ಏಪ್ರಿಲ್ 15ರ ವೇಳೆಗಷ್ಟೇ ರಸಗೊಬ್ಬರ ಶುರುವಾಗಬಹುದು ಎಂದು ಅಂದಾಜಿಸಲಾಗಿದೆ.
ಕೃಷಿಗೆ ಅತ್ಯಗತ್ಯ: ರಾಜ್ಯದಲ್ಲಿ ಕೃಷಿಯ ಸೀಸನ್ ಶುರುವಾಗುವುದು ಜೂನ್‌ನಲ್ಲಿ. ಆಗ ವಿವಿಧ ಜಿಲ್ಲೆಗಳಿಗೆ ಅಗತ್ಯವಿರುವ ಪ್ರಮಾಣವನ್ನು ಪೂರೈಕೆ ಮಾಡುವ ಹೊಣೆ ಎಂಸಿಎಫ್‌ಗೆ ಇದೆ. ಪ್ರಸ್ತುತ ಶಟ್‌ಡೌನ್ ವಿಸ್ತರಣೆಯಾಗಿರುವುದರಿಂದ ಉತ್ಪಾದನೆ ಚುರುಕುಗೊಳಿಸದಿದ್ದರೆ ಯೂರಿಯಾ ಕೊರತೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಕೊವಿಡ್ ಕಾರಣದಿಂದಾಗಿ ಹೊರದೇಶಗಳಿಂದಲೂ ಯೂರಿಯಾ ಆಮದಾಗುತ್ತಿಲ್ಲ.
ಎಂಸಿಫ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ: ಎಂಸಿಎಫ್ ವಾರ್ಷಿಕ 3,79,500 ಮೆಟ್ರಿಕ್ ಟನ್ ಅಮೋನಿಯಾ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 2,17,800 ಮೆಟ್ರಿಕ್ ಟನ್ ಅಮೋನಿಯಾ(ಯೂರಿಯಾಉತ್ಪಾದನೆಗೆ ಬಳಕೆ), 2,80,000 ಮೆಟ್ರಿಕ್ ಟನ್ ಡಿಎಪಿ ಹಾಗೂ ಎನ್‌ಪಿ ರಸಗೊಬ್ಬರ, 24,750 ಅಮೋನಿಯಮ್ ಬೈ ಕಾರ್ಬೊನೇಟ್, 33,000 ಮೆಟ್ರಕ್ ಟನ್ ಸಲ್ಫೂೃರಿಕ್‌ಆಸಿಡ್, 21,450 ಮೆಟ್ರಿಕ್ ಟನ್ ಸಲ್ಫೊನೇಟೆಡ್ ನಾಫ್ತಲಿನ್ ಫಾರ್ಮಲ್‌ಡಿಹೈಡ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.