

ಉಡುಪಿ: ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಎರಡು ದಿನಗಳ ಹಿಂದೆಯೇ ಅನುಮತಿ ನೀಡಿದ್ದರೂ ಕಚ್ಚಾವಸ್ತುಗಳ ಪೂರೈಕೆ, ಸೀಮಿತ ಉದ್ಯೋಗಿಗಳೊಂದಿಗೆ ಯಂತ್ರೋಪಕರಣಗಳ ನಿರ್ವಹಣೆ ಸವಾಲಾಗಿದೆ.
ಕಾರ್ಯಚಟುವಟಿಕೆ ಆರಂಭಿಸುವ ಕೈಗಾರಿಕೆಗಳು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕಿದ್ದು, ಷರತ್ತುಗಳನ್ನು ಪಾಲಿಸಿ ಕೆಲಸ ಶುರು ಮಾಡಬಹುದು. ಗುರುವಾರ 45ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ.25ರಷ್ಟು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿವೆ. ಕೈಗಾರಿಕೆಗಳು ಚಟುವಟಿಕೆ ಆರಂಭಿಸಬೇಕೆಂದರೆ ಕಚ್ಚಾವಸ್ತು ಅಗತ್ಯ. ಸದ್ಯದ ಸ್ಥಿತಿಯಲ್ಲಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಕಚ್ಚಾ ವಸ್ತು ತರಿಸಿಕೊಳ್ಳುವುದೂ ಅಪಾಯಕಾರಿ. ನಂಜನಗೂಡು ಘಟನೆ ಬಳಿಕ ಹೊರದೇಶಗಳಿಂದ ಕಚ್ಚಾವಸ್ತುಗಳ ಪೂರೈಕೆ ಸ್ಥಗಿತವಾಗಿದೆ. ಹೀಗಾಗಿ ಅಮದು ಮಾಡಿಕೊಂಡ ವಸ್ತುಗಳನ್ನು ಸುರಕ್ಷಿತವಾಗಿ ಸ್ಯಾನಿಟೈಸ್ ಮಾಡಿ ಸಂಗ್ರಹಿಸಬೇಕಿದೆ.
ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ನೌಕರರನ್ನು ಬಳಸಿ ಕಾರ್ಯ ಅರಂಭಿಸಲು ಅವಕಾಶ ಲಭಿಸಿರುವುದು ಸ್ವಲ್ಪ ಸಮಾಧಾನ ತಂದಿದೆ. ಆದರೆ ಊರಿಗೆ ತೆರಳಿರುವ ನೌಕರರು, ಕಾರ್ಮಿಕರನ್ನು ತರಿಸಿಕೊಳ್ಳುವುದೂ ಸವಾಲು. ಹಲವು ಕಾರಣಗಳಿಂದ ಅನೇಕ ಉದ್ಯಮಿಗಳು ಮೇ 3ರವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.
ಮುಖ್ಯವಾಗಿ ಕಚ್ಚಾವಸ್ತು ಮತ್ತು ಕಾರ್ಮಿಕರ ಕೊರತೆ ಇದೆ. ಸರ್ಕಾರ ದಿನಕ್ಕೊಂದು ನಿಯಮ ಜಾರಿ ಮಾಡುತ್ತಿರುವುದರಿಂದ ಉದ್ಯಮಿಗಳಲ್ಲೂ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿಯಮಾವಳಿಗಳನ್ನು ರೂಪಿಸಿದರೆ ಉತ್ತಮ.
- ಶ್ರೀಕೃಷ್ಣ ರಾವ್ ಕೊಡಂಚ, ಅಧ್ಯಕ್ಷರು, ಚೇಂಬರ್ಸ್ ಆಫ್ ಕಾಮರ್ಸ್ ಉಡುಪಿ
ಲಾಕ್‌ಡೌನ್ ಸ್ವಲ್ಪ ಸಡಿಲಿಕೆ ಮಾಡಿರುವುದು ಸಣ್ಣ ಕೈಗಾರಿಕೆಗಳಿಗೆ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಅನೂಕೂಲ. ಇದರಿಂದ ಸರ್ಕಾರಕ್ಕೂ ಆದಾಯ, ಕಂಪನಿ- ಉದ್ಯೋಗಿಗಳಿಗೂ ಸಂಪಾದನೆಯಾಗಲಿದೆ. ನಮ್ಮ ಸಂಘದಲ್ಲಿ 550ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಉದ್ಯೋಗಿಗಳಿಗೆ ಕೆಲಸಕ್ಕೆ ಹೋಗಿ ಬರಲು ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಸ್ವಂತ ವಾಹನ ಇಲ್ಲದವರಿಗೆ ವಾಹನ ಸೌಕರ್ಯ ಕಲ್ಪಿಸಬೇಕಿದೆ.
- ಐ.ಅರ್.ಫರ್ನಾಂಡಿಸ್, ಅಧ್ಯಕ್ಷರು, ಸಣ್ಣ ಕೈಗಾರಿಕೆಗಳ ಸಂಘ, ಉಡುಪಿ