ಖಾಸಗಿ ಆಸ್ಪತ್ರೆಗಳು ಖಾಲಿಖಾಲಿ, ಕರಾವಳಿಯ ಪ್ರಮುಖ ಹಾಸ್ಪಿಟಲ್‌ಗಳಿಗೆ ಲಾಕ್‌ಡೌನ್ ಹೊಡೆತ

hosp
Published on

ಮಂಗಳೂರು: ಕೊವಿಡ್ ಅನಿಯಂತ್ರಿತವಾಗಿ ಹರಡುವ ಭಯದಿಂದ ಮಾರ್ಚ್ 2ನೇ ವಾರದಲ್ಲೇ ದ.ಕ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಗಳು ತಮ್ಮ ಹೊರರೋಗಿ ವಿಭಾಗವನ್ನು ಮುಚ್ಚಿವೆ. ಪ್ರಸ್ತುತ ಹೊರ ಜಿಲ್ಲೆಗಳ ರೋಗಿಗಳು ಕೂಡ ಬರುತ್ತಿಲ್ಲ. ಸರ್ಕಾರದಿಂದ ಯಾವುದೇ ರೀತಿಯ ನೆರವು ಇಲ್ಲದೆ, ಮುಂದೇನು ಎನ್ನುವ ಚಿಂತೆಯಲ್ಲಿದೆ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ.

ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಶೇ.50ಕ್ಕೂ ಹೆಚ್ಚು ಇಳಿಕೆ ಆಗಿರುವುದರಿಂದ ಸಿಬ್ಬಂದಿಗೆ ರಜೆ ನೀಡಿವೆ. ಶೇ.50 ಮಂದಿ ರಜೆ ಹಾಗೂ ಉಳಿದವರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗಳ ಒಟ್ಟು ಹಾಸಿಗೆ ಸಂಖ್ಯೆಯಲ್ಲಿ ಶೇ.20-25ರಷ್ಟು ಮಾತ್ರವೇ ಸದ್ಯ ಬಳಕೆಯಾಗುತ್ತಿದೆ.

ಕೇರಳದಿಂದ ರೋಗಿಗಳು ಬಾರದಂತೆ ನಾವೇ ಒಪಿಡಿ ವಿಭಾಗ ಮುಚ್ಚಿದ್ದೇವೆ, ಇದು ಕೊವಿಡ್ ನಿಯಂತ್ರಣಕ್ಕೆ ನೆರವಾಗಿದೆ. ಇಲ್ಲವಾದರೆ ಪರಿಸ್ಥಿತಿ ಕೈ ಮೀರುತ್ತಿತ್ತು ಎನ್ನುತ್ತಾರೆ ಎ.ಜೆ.ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ. ಎಲ್ಲ ಕೊವಿಡ್ ರೋಗಿಗಳನ್ನೂ ವೆನ್ಲಾಕ್‌ನಲ್ಲೇ ಚಿಕಿತ್ಸೆಗೊಳಪಡಿಸಲಾಗಿದೆ. ಹಾಗೆಂದು ಪ್ರಮುಖ ಆಸ್ಪತ್ರೆಯಾಗಿರುವ ನಾವು ಕೊವಿಡ್ ಚಿಕಿತ್ಸೆಗೆ ಬೇಕಾದ ಪಿಪಿಇ(ಸುರಕ್ಷತಾ ಕವಚ) ಮತ್ತಿತರ ಉಪಕರಣಗಳನ್ನು ಸಿದ್ಧಪಡಿಸಿ ಇರಿಸಿಕೊಳ್ಳಲೇಬೇಕಾಗುತ್ತದೆ. ಇದಕ್ಕೆ ಸಾಕಷ್ಟು ವೆಚ್ಚವೂ ತಗಲುತ್ತದೆ ಎಂದರು.

ಆಸ್ಪತ್ರೆಗಳ ವಿದ್ಯುತ್ ಬಿಲ್ಲನ್ನು ಕೈಗಾರಿಕೆ ಎಂಬ ವಲಯದಡಿ ಮೂರು ತಿಂಗಳು ಮುಂದೂಡಲು ಅವಕಾಶವೇನೋ ನೀಡಿದ್ದಾರೆ, ಆದರೆ ಅದಕ್ಕೆ ಮತ್ತೆ ಶೇ.1ಬಡ್ಡಿ ಕೇಳುತ್ತಿದ್ದಾರೆ, 40-50 ಲಕ್ಷ ರೂ.ಮಾಸಿಕ ಬಿಲ್ ಬರುವಾಗ ಹೆಚ್ಚುವರಿ ತೆರಿಗೆ ನಮಗೆ ಹೊರೆ. ಹಲವು ಸೇವೆಗಳಿಗಾಗಿ ನಮ್ಮಿಂದ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಅದನ್ನು ನಿಃಶುಲ್ಕವಾಗಿ ಮುಂದೂಡಬೇಕಿತ್ತು, ಅದಕ್ಕೂ ಶೇ.9-10ರಷ್ಟು ಮೇಲ್ತೆರಿಗೆ ಹಾಕಲು ಮುಂದಾಗಿದ್ದಾರೆ. ಸಿಬ್ಬಂದಿಯ ಇಎಸ್‌ಐ ಮತ್ತು ಪಿಎಫ್ ಪಾವತಿಗೆ ಸಮಯಾವಕಾಶ ಕೇಳಿದರೆ ಅದನ್ನೂ ಮಾಡಿಲ್ಲ, ಇನ್ನೊಂದೆಡೆ ಇಎಸ್‌ಐ ಯೋಜನೆಯಡಿ ಫಲಾನುಭವಿಗಳ ಮೊತ್ತವನ್ನೂ ಆಸ್ಪತ್ರೆಗಳಿಗೆ ಇಎಸ್‌ಐ ಬಿಡುಗಡೆ ಮಾಡುತ್ತಿಲ್ಲ ಇದರಿಂದ ಪ್ರಸ್ತುತ ಆಸ್ಪತ್ರೆ ನಿರ್ವಹಣೆ ಸವಾಲು ಎನ್ನುತ್ತಾರೆ ಮಾರ್ಲ.

8 ಮೆಡಿಕಲ್ ಕಾಲೇಜುಗಳಲ್ಲಿ ಶೇ.30 ಹಾಸಿಗೆಯಷ್ಟೇ ಭರ್ತಿ: ದ.ಕ. ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆ, ಇದರಲ್ಲಿ ಒಟ್ಟು ಸಾಮರ್ಥ್ಯದ ಶೇ.30ರಷ್ಟು ಹಾಸಿಗೆಗಳು ಮಾತ್ರವೇ ಭರ್ತಿಯಾಗಿವೆ. ಜಿಲ್ಲೆಯಲ್ಲಿ 30 ಪ್ರಮುಖ ಆಸ್ಪತ್ರೆಗಳಿದ್ದು, ದಿನಕ್ಕೆ ಸುಮಾರು 5000ವರೆಗೆ ಅಡ್ಮಿಶನ್ ಆಗುತ್ತಿತ್ತು. ಈಗ ಅದು 500-600ಕ್ಕೆ ಇಳಿದಿರಬಹುದು ಎನ್ನುತ್ತಾರೆ ಆಸ್ಪತ್ರೆಗಳ ಸಂಘಟನೆ ಮುಖ್ಯಸ್ಥರು.

ಲಾಕ್‌ಡೌನ್ ಕಾರಣದಿಂದಾಗಿ ಹೊರ ಜಿಲ್ಲೆಗಳಿಂದ ರೋಗಿಗಳು ಬರುತ್ತಿಲ್ಲ, ಆಸ್ಪತ್ರೆಗಳ ಹತ್ತಿರ ಇರುವ ರೋಗಿಗಳು ಮಾತ್ರ ಬರುತ್ತಾರೆ. ತುರ್ತು ಚಿಕಿತ್ಸೆ, ಅಪಘಾತ ಇತ್ಯಾದಿ ಕಾರಣಗಳಿದ್ದಲ್ಲಿ ಮಾತ್ರವೇ ಬರುತ್ತಾರೆ.

ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ 400 ಬೆಡ್‌ಗಳಿದ್ದು, ಸುಮಾರು 160 ಬೆಡ್‌ಗಳು ಸದ್ಯ ಭರ್ತಿಯಾಗಿವೆ. ಶಿವಮೊಗ್ಗ, ದಾವಣಗೆರೆ ಕಡೆಯ ಕೆಲವು ಬಡ ರೋಗಿಗಳು ಚಿಕಿತ್ಸೆ ಪೂರ್ತಿಗೊಳಿಸಿದ್ದರೂ, ಊರಿಗೆ ವಾಪಸಾಗುವ ವ್ಯವಸ್ಥೆ ಇಲ್ಲದೆ ಇಲ್ಲಿಯೇ ಬಾಕಿಯಾಗಿದ್ದಾರೆ. ಅವರಿಗೆ ಊಟ, ವಸತಿ ಮುಂದುವರಿಸ ಲಾಗಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಅನೇಕ ಸಿಬ್ಬಂದಿಯಿದ್ದು ಅವರಲ್ಲಿ ಕೆಲವರು ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಸೇವೆ ಮುಂದುವರಿಸಿದ್ದಾರೆ. ಉಳಿದವರನ್ನು ಅವರ ಪ್ರದೇಶಕ್ಕೆ ವಾಹನ ಮೂಲಕ ಬಿಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಮುಖ ಆಸ್ಪತ್ರೆಗಳಾದ ಯೆನಪೊಯ, ಒಮೆಗಾ, ಇಂಡಿಯಾನಾ, ಕೆ.ಎಸ್.ಹೆಗ್ಡೆ ಮುಂತಾದೆಡೆಗಳಲ್ಲೂ ಒಟ್ಟು ಬೆಡ್‌ಗಳಲ್ಲಿ ಶೇ.20-30ರಷ್ಟೇ ಭರ್ತಿಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಗಳ ಸಾಲಗಳ ಇಎಂಐ ಮುಂದೂಡಿಕೆ, ಟಿಡಿಎಸ್ ಕಡಿತ ಮುಂದೂಡಿಕೆಗೆ ಬಡ್ಡಿ ವಿಧಿಸಬಾರದು ಸೇರಿದಂತೆ ನಮ್ಮ ಕೆಲವು ಒತ್ತಾಯಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳ ಗಮನಕ್ಕೆ ತರಲಾಗಿದೆ. ಇದುವರೆಗೆ ಸ್ಪಂದನೆ ಬಂದಿಲ್ಲ.

-ಡಾ.ಪ್ರಶಾಂತ್ ಮಾರ್ಲ, ವೈದ್ಯಕೀಯ ನಿರ್ದೇಶಕರು, ಎ.ಜೆ.ಆಸ್ಪತ್ರೆ

ಉಡುಪಿಯಲ್ಲಿಯೂ ಇದೇ ಸ್ಥಿತಿ

ಉಡುಪಿ: ಲಾಕ್‌ಡೌನ್ ಪರಿಣಾಮ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆಗಮಿಸುವ ರೋಗಿಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ಕರೊನಾ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ಆಗಬಾರದು ಎಂಬ ಉದ್ದೇಶದಿಂದ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಲಭ್ಯ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಮೊದಲಾದ ಭಾಗದಿಂದ ರೋಗಿಗಳು ಬರುತ್ತಿದ್ದರು. ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಅಗತ್ಯ ಇದ್ದಲ್ಲಿ ಜಿಲ್ಲೆ ಗಡಿಗಳಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಬಿಡಲಾಗುತ್ತಿದೆ. ಎಮರ್ಜೆನ್ಸಿ ಸರ್ಜರಿಗೆ ಮಾತ್ರ ರೋಗಿಗಳಿಗೆ ಸೂಚನೆ ನೀಡಿ ಆಸ್ಪತ್ರೆಗೆ ಕರೆಸಲಾಗುತ್ತಿದೆ. ಉಳಿದ ಸರ್ಜರಿಗಳನ್ನು ಸಾಕಷ್ಟು ಮುಂದೂಡಲಾಗಿದೆ.

ಕೆಎಂಸಿಯಲ್ಲಿ ಬದಲಾದ ಚಿತ್ರಣ: ಮಣಿಪಾಲ ಕೆಎಂಸಿಗೆ ಪ್ರತಿನಿತ್ಯ 2500-3000 ಮಂದಿ ಒಪಿಡಿಯಲ್ಲಿ ನೋಂದಾಯಿಸುತ್ತಿದ್ದರು. ಪ್ರಸ್ತುತ ತುರ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಒಪಿಡಿ ಸೇವೆ ನೀಡಲಾಗುತ್ತಿದ್ದು, ರೋಗಿಗಳ ಸಂಖ್ಯೆ 500ಕ್ಕೆ ಇಳಿದಿದೆ. ಕೆಎಂಸಿ ಐಸಿಯು, ಜನರಲ್, ಸ್ಪೆಷಲ್, ಸೆಮಿ ಸ್ಪೆಷಲ್ ಸೇರಿದಂತೆ ಒಟ್ಟು 2032 ಬೆಡ್‌ಗಳನ್ನು ಹೊಂದಿರುವ ಬೃಹತ್ ಆಸ್ಪತ್ರೆ. ಈ ಹಿಂದೆ ಆಸ್ಪತ್ರೆಯಲ್ಲಿ 1500 ರೋಗಿಗಳ ಅಡ್ಮಿಶನ್ ಆಗುತ್ತಿತ್ತು, ಈಗ ಈ ಸಂಖ್ಯೆ 500ಕ್ಕೆ ಇಳಿದಿದೆ. ಪ್ರತಿನಿತ್ಯ ರೋಗಿಗಳಿಗೆ 200ರಿಂದ 300ರಷ್ಟು ವಿವಿಧ ಸ್ವರೂಪದ ಸರ್ಜರಿಗಳು ನಡೆಯುತ್ತಿದ್ದದ್ದು ಈಗ 40ರಿಂದ 50ಕ್ಕೆ ಸೀಮಿತವಾಗಿದೆ.

ತುರ್ತುಸ್ಥಿತಿಯಲ್ಲಿ ಮಾತ್ರ ಸರ್ಜರಿ: ಮಣಿಪಾಲ ಸಮೂಹ ಸಂಸ್ಥೆಗೆ ಸೇರಿದ ಟಿಎಂಎ ಪೈ ಆಸ್ಪತ್ರೆಯನ್ನು ಸಂಪೂರ್ಣ ಕೊವಿಡ್-19 ಐಸೊಲೇಶನ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಆದರ್ಶ ಆಸ್ಪತ್ರೆ 200 ಬೆಡ್‌ಗಳನ್ನು ಹೊಂದಿದ್ದು, ಪ್ರತಿನಿತ್ಯ 100ರಿಂದ 120 ಮಂದಿ ಒಪಿಡಿ ಸೇವೆ ಪಡೆದುಕೊಳ್ಳುತ್ತಿದ್ದರೂ ಇದೀಗ ಈ ಸಂಖ್ಯೆ 10ರಿಂದ 15ಕ್ಕೆ ಇಳಿದಿದೆ. ಪ್ರತಿನಿತ್ಯ 250ರಷ್ಟು ನಡೆಯುತ್ತಿದ್ದ ಸರ್ಜರಿ 15ರಿಂದ 20ಕ್ಕೆ ಇಳಿಮುಖವಾಗಿದೆ. ಜಿಲ್ಲೆಯ ಇತರೆ ಖಾಸಗಿ ಆಸ್ಪತ್ರೆಗಳಾದ ಗಾಂಧಿ, ಹೈಟೆಕ್, ನ್ಯೂಸಿಟಿ, ಮಿತ್ರ, ಲಲಿತ್ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಶೇ.30ರಿಂದ 40ರಷ್ಟು ಇಳಿಮುಖವಾಗಿದ್ದು, ಸರ್ಜರಿ, ಮೊದಲಾದ ವೈದ್ಯಕೀಯ ಚಟುವಟಿಕೆ ಶೇ.30ಕ್ಕೆ ತಗ್ಗಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆ ವಲಯದ ಮುಖ್ಯಸ್ಥರು.

ಕರೊನಾ ಮುಂಜಾಗ್ರತಾ ಕ್ರಮವಾಗಿ ಜನಸಂದಣಿಯಾಗಬಾರದು ಎಂಬ ಉದ್ದೇಶದಿಂದ ಒಪಿಡಿ ಸೇವೆಯನ್ನು ತುರ್ತುಸ್ಥಿತಿಗೆ ಸೀಮಿತಗೊಳಿಸಲಾಗಿದೆ. ಎಮರ್ಜೆನ್ಸಿ ಇಲ್ಲದ ಸರ್ಜರಿಗಳನ್ನು ವೈದ್ಯರ ಸಲಹೆ ಮೇರೆಗೆ ಮುಂದೂಡಲಾಗಿದೆ. ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಎರಡು ಐಸೊಲೇಷನ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಹೊರ ಜಿಲ್ಲೆಯ ರೋಗಿಗಳು ಫೋನ್ ಮೂಲಕ ಸಂಪರ್ಕಿಸಿ ಸಲಹೆ ಪಡೆಯುತ್ತಿದ್ದಾರೆ.

- ಡಾ.ಜಿ.ಎಸ್ ಚಂದ್ರಶೇಖರ್, ವೈದ್ಯಕೀಯ ನಿರ್ದೇಶಕ, ಆದರ್ಶ ಆಸ್ಪತ್ರೆ, ಉಡುಪಿ

ಲಾಕ್‌ಡೌನ್ ಪರಿಣಾಮ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ತುರ್ತು ವೈದ್ಯಕೀಯ ಪ್ರಕ್ರಿಯೆ, ಸರ್ಜರಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ರೋಗಿಗಳಿಗೆ ಟೆಲಿ ಮೆಡಿಸನ್ ವ್ಯವಸ್ಥೆ ಮೂಲಕ ನೇರ ವೈದ್ಯರೊಂದಿಗೆ ಸಮಾಲೋಚಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ವೈದ್ಯರಿಗೆ 100 ಕರೆಗಳೂ ಬರುತ್ತಿವೆ.

-ಅವಿನಾಶ್ ಶೆಟ್ಟಿ, ಅಧೀಕ್ಷಕರು, ಕೆಎಂಸಿ ಆಸ್ಪತ್ರೆ ಮಣಿಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net