

ಕೋಲಾರ: ಕರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಸಾರ್ವಜನಿಕರಿಂದಲೂ ಸಹಕಾರ ಸಿಗುತ್ತಿದೆ. ಆದರೆ, ಬಡ-ಮಧ್ಯಮ ವರ್ಗ ತಲ್ಲಣಗೊಂಡಿರುವುದು ಕೂಡ ಅಷ್ಟೇ ವೇದ್ಯ ವಿಚಾರ. 21 ದಿನಗಳ ಲಾಕ್ಡೌನ್ ನಿನ್ನೆ ಮುಕ್ತಾಯವಾಗಿದ್ದು, ಎರಡನೇ ಹಂತದ ಲಾಕ್ಡೌನ್ ವಿಚಾರ ನಿನ್ನೆ ಘೋಷಣೆಯಾಗಿತ್ತು. ಈ ವೇಳೆ ಟಿವಿಯಲ್ಲಿ ಬರುತ್ತಿದ್ದ ಸುದ್ದಿಯನ್ನು ನೋಡ್ತಾ ನೋಡ್ತಾ ಒಬ್ಬ ವ್ಯಕ್ತಿ ಕುಸಿದವರು ಮತ್ತೆ ಮೇಲೇಳಲೇ ಇಲ್ಲ.
ಹೌದು.. ಇದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆ. ಟಿವಿ ನೋಡ್ತಾ ನೋಡ್ತಾ ಕುಸಿದು ಕುಳಿತ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದರು. ಮೃತರನ್ನು ಮಾಸ್ತಿಯ ಮುರುಗೇಶ್ (45) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕಾಡುತ್ತಿತ್ತು. ನಾಲ್ಕು ಹೆಣ್ಣು ಮಕ್ಕಳು. ಕೂಲಿ,ನಾಲಿ ಮಾಡಿ ಬದುಕು ಸಾಗಿಸುತ್ತಿದ್ದ ಮುರುಗೇಶ್ ಅವರಿಗೆ ಈಗ 20 ದಿನಗಳಿಂದ ಆದಾಯ ಇರಲಿಲ್ಲ. ಲಾಕ್ಡೌನ್ ನಿನ್ನೆಗೆ ಮುಗಿಯಬಹುದೆಂಬ ಲೆಕ್ಕಾಚಾರದಲ್ಲಿ ಅವರಿದ್ದರು. ಮಕ್ಕಳ ಮದುವೆಯ ವಿಚಾರವೂ ಮುರುಗೇಶ್ ಅವರನ್ನು ಚಿಂತೆಗೀಡು ಮಾಡಿತ್ತು. ಲಾಕ್ಡೌನ್ ಹೀಗೆಯೇ ಮುಂದುವರಿದರೆ ಸಂಸಾರ ನಡೆಸುವುದು ಕಷ್ಟ ಎಂದು ಆಪ್ತರ ಬಳಿ ಹೇಳಿಕೊಂಡದ್ದಾಗಿ ವರದಿಯಾಗಿದೆ.