

ಕನಕಪುರ: ತಾಲೂಕಿನ ದೊಡ್ಡಾಲಹಳ್ಳಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶ ಒತ್ತುವರಿ ಹಾಗೂ 36 ಎಕರೆ ಜಮೀನಿನಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಪ್ಪ ಎಂಬುವರು 80 ಲಕ್ಷ ರೂ. ನರೇಗಾ ಕಾಮಗಾರಿ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಒಂಬುಡ್ಸ್ಮನ್, ಪಂಚಾಯತ್ ರಾಜ್, ಅರಣ್ಯ ಇಲಾಖೆ, ರಾಜ್ಯ ಗುಣಮಟ್ಟ ನಿಯಂತ್ರಣ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿತು.
ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಜಿಪಂ ಸಿಇಒ ಹಾಗೂ ಸರ್ಕಾರಕ್ಕೆ ದೂರು ನೀಡಿ ದೊಡ್ಡಾಲಹಳ್ಳಿ ಸಮೀಪ ತಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ ರೈತರಿಂದ 12 ಎಕರೆ ಜಮೀನು ಖರೀದಿಸಿ ಪಕ್ಕದಲ್ಲಿನ ಗೋಮಾಳ ಮತ್ತು ಚೀಲಂದವಾಡಿ ಸರ್ವೇ ನಂ. 1ರ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತನ್ನ ಜಮೀನಿನ ಸುತ್ತಳತೆ 80 ಲಕ್ಷ ರೂ. ನರೇಗಾ ಕಾಮಗಾರಿಯಲ್ಲಿ ಪ್ರವಾಹ ನಿಯಂತ್ರಣ ಮತ್ತು ಮಣ್ಣಿನ ಸವಕಳಿ ಕಾಮಗಾರಿ ಮಾಡುವುದಾಗಿ ಬಹುತೇಕ ನಿಯಮ ಉಲ್ಲಂಘನೆ ಮಾಡಿ ಬೃಹತ್ ತಡೆಗೋಡೆಗಳನ್ನು ನಿಮಿರ್ಸಿಕೊಂಡು ಹಣ ದುರುಪಯೋಗ ಮಾಡಲಾಗಿದೆ ಎಂದು ಲಿಖಿತ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಆದೇಶದ ಮೇರೆಗೆ ಇಂದು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಲು ಆಗಮಿಸಿದ್ದರು.
ಕಾಮಗಾರಿ ಮುಂದುವರಿಸಲು ರೈತರ ಮನವಿ: ಒಂಬುಡ್ಸ್ಮನ್ ಹಾಗೂ ಇತ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವ ವೇಳೆ ರೈತರು ಮನವಿ ಮಾಡಿ ದೊಡ್ಡಾಲಹಳ್ಳಿಯ ಮಕ್ಳಂದ ರಸ್ತೆಯಿಂದ ಅರಣ್ಯ ಪ್ರದೇಶದವರೆಗೂ ನರೇಗಾ ಕಾಮಗಾರಿಯಲ್ಲಿ ತಡೆಗೋಡೆ ನಿಮಾರ್ಣ ಮಾಡಿರುವುದರಿಂದ ಸರ್ಕಾರಕ್ಕಾಗಲಿ, ರೈತರಿಗಾಗಲಿ ನಷ್ಟವಾಗಿಲ್ಲ. ಬದಲಾಗಿ ಅರಣ್ಯ ಪ್ರದೇಶದಿಂದ ರೈತರ ಜಮೀನುಗಳಿಗೆ ನುಗ್ಗುತ್ತಿದ್ದ ಕಾಡಾನೆಗಳ ಹಾವಳಿ ನಿಯಂತ್ರಿಸಲು ಸಹಕಾರಿಯಾಗಿದೆ. ನೂರಾರು ರೈತರಿಗೆ ಇದರಿಂದ ಅನುಕೂಲವಾಗಿದೆ. ಆದ್ದರಿಂದ ಈ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರಿಸಲು ಪರಿಶೀಲನಾ ತಂಡಕ್ಕೆ ಮನವಿ ಮಾಡಿದರು.
ಹುರುಳಿಲ್ಲ: ಗ್ರಾಮ ಪಂಚಾಯತಿ ಅಧ್ಯಕ್ಷ ಆನಂದ್ ಮಾತನಾಡಿ, ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜಮೀನು ಕೂಡ ಒತ್ತುವರಿಯಾಗಿಲ್ಲ. ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಯಾವುದೇ ಗುರುತರವಾದ ಅಕ್ರಮ ನಡೆದಿಲ್ಲ ಎಂದರು.
ವರದಿ ಸಲ್ಲಿಕೆ: ತಮ್ಮ ಭೇಟಿ ಬಗ್ಗೆ ಪತ್ರಿಕೆಗೆ ತಿಳಿಸಿದ ಅಧಿಕಾರಿಗಳು, ದೂರಿನ ಮೇರೆಗೆ 9 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. ಇಂದು ಸರ್ವೇ ವೇಳೆ 796 ಅಡಿ ಕಾಮಗಾರಿ ಆಗಿರುವ ಬಗ್ಗೆ ಕಂಡುಬಂದಿದೆ. ಉಳಿದಂತೆ ಎಂಬಿ ಹಾಗೂ ಇತರ ದಾಖಲೆಗಳ ಪ್ರಕಾರ ಪರಿಶೀಲನೆ ನಡೆಸಿ ಶ್ರೀವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ತನಿಖಾಧಿಕಾರಿಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ವಲಯ ಅರಣ್ಯಾಧಿಕಾರಿ ದಾಳೇಶ್ ಅರಣ್ಯ ಪ್ರದೇಶದ ಗಡಿಕಲ್ಲನ್ನೇ ಕಿತ್ತು ಬದಲಾವಣೆ ಮಾಡಿ ಯಾವುದೇ ಒತ್ತುವರಿ ಆಗಿಲ್ಲ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ತನಿಖೆ ಮಾಡಿ ದಾಳೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜತೆಗೆ ಈ ದಿನ ಪರಿಶೀಲನೆ ವೇಳೆ ಸ್ಥಳಿಯ ಗ್ರಾಮಸ್ಥರ ಗುಂಪು ಕಟ್ಟಿ ನನಗೆ ಬೆದರಿಕೆಯೊಡ್ಡುವ ತಂತ್ರ ಹೆಣೆಯಲಾಗಿತ್ತು.
| ಕಂಚನಹಳ್ಳಿ ರವಿಕುಮಾರ್ ಸಾಮಾಜಿಕ ಕಾರ್ಯಕರ್ತ