13ನೇ ಬೆಟಾಲಿಯನ್ ಸ್ಥಾಪನೆಗೆ ಸ್ಥಳ ಗುರುತು *ತಾಲೂಕಿನ ಚಂದ್ರಬಂಡಾದಲ್ಲಿ 43 ಎಕರೆ ಸ್ಥಳ ಗುರುತು *ಅಹಿತಕರ ಘಟನೆ ನಡೆದರೆ ಬೆಟಾಲಿಯನ್ ಅನುಕೂಲ

M.PITTAMADAYYA
M.PITTAMADAYYA
Published on

ರಾಯಚೂರು ಗಡಿ ಭಾಗ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಹೆಚ್ಚಿನ ಬಂದೋಬಸ್ತ್ ಒದಗಿಸಲು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್ ಪಡೆಗಳಿಗೆ ಸಹಾಯಕ್ಕೆ ಸರ್ಕಾರದಿಂದ ಹೊಸದಾಗಿ 13ನೇ ಕರ್ನಾಟಕ ಮೀಸಲು ಪಡೆ ಬೆಟಾಲಿಯನ್ ಸ್ಥಾಪನೆ ಮಾಡಲು ಆದೇಶ ಮಾಡಿದ್ದು, ಈ ಹಿನ್ನಲೆಯಲ್ಲಿ ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ 43 ಎಕರೆ ಸ್ಥಳವನ್ನು ಗುರುತು ಮಾಡಲಾಗಿದೆ. ಎರಡು ತಿಂಗಳಿನಲ್ಲಿ ಕಾರ್ಯ ಪ್ರಾರಂಭ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಜಿಲ್ಲೆಲ್ಲಿ ಯಾವುದೇ ಘಟನೆಗಳು ಜರುಗಿದರೆ, ಕಲಬುರಗಿಯ 4ನೇ ಪಡೆಯ ಕಮಾಂಡೆಂಟ್ ಕಚೇರಿಗೂ ಕೊಪ್ಪಳದ ಮುನಿರಾಬಾದ್‌ನ ಸ್ಥಾವರಗಳಿಗೂ ಬರೋಬ್ಬರಿ 200 ಕಿ.ಮೀ. ಅಂತರವಿದೆ. ಹೀಗಾಗಿ ಮೇಲಧಿಕಾರಿಗಳು, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲ್ವಿಚಾರಣೆಗೆ ದಿನವಿಡೀ ಪ್ರವಾಸ ಮಾಡಬೇಕಾಗಿತ್ತು. ಸಣ್ಣಪುಟ್ಟ ಆಡಳಿತಾತ್ಮಕ ಕೆಲಸಗಳಿಗೂ ಕೆಎಸ್‌ಐಎಸ್‌ಎಫ್ ಪೊಲೀಸರು ದೂರ-ದೂರ ಪ್ರಮಾಣ ಮಾಡುವುದು ಅನಿವಾರ್ಯವಾಗಿತ್ತು.

ಹೀಗಾಗಿ ರಾಯಚೂರಿನಲ್ಲಿಯೇ ಹೊಸ ಪಡೆ ಸ್ಥಾಪಿಸುವಂತೆ ಮಳೆಗಾದ ಅಧಿವೇಶನದಲ್ಲಿ ಯಾದಗಿರಿಯ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಧ್ವನಿ ಎತ್ತಿದ್ದರು. ಜತೆಗೆ ಕೆಎಸ್‌ಐಎಸ್‌ಎಫ್ ಕಾಸ್ಟೇಬಲ್‌ಗಳಿಂದ ಹಿಡಿದು ಮೇಲಧಿಕಾರಿ ದರ್ಜೆಯ ಎಲ್ಲ ಅಧಿಕಾರಿಗಳೂ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಪರಿಗಣನೆ ಜತೆಗೆ ವಸ್ತು ಸ್ಥಿತಿ ಅವಲೋಕಿಸಿದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ರಾಯಚೂರಿನ ಭಾಗಕ್ಕೆ ಹೊಸ ಪಡೆ ಸೃಜಿಸುವಂತೆ ಕೋರಿ ಜುಲೈ 29 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರ ಇದೀಗ ಸೆ.12 ರಂದು ಅನುಮೋದನೆ ನೀಡಿದೆ.

ಸ್ಥಳ ಗುರುತು ಎಲ್ಲಿ ?

ಜಿಲ್ಲೆಯಲ್ಲಿ ಹೊಸದಾಗಿ 13ನೇ ಕೆಎಸ್‌ಆರ್‌ಪಿ ಬೆಟಾಲಿಯನ್ ನಿರ್ಮಾಣಕ್ಕೆ ಈಗಾಗಲೇ ತಾಲೂಕಿನ ಕುರುಬದೊಡ್ಡಿ, ಕೊತ್ತದೊಡ್ಡಿ, ತುರ್ಕಂಡೊಣಿ ಗ್ರಾಮದಲ್ಲಿ ಅನೇಕ ಸ್ಥಳಗಳನ್ನು ಗುರುತ್ತಿಸಲಾಗಿತ್ತು. ಆದರೆ ಅನೇಕ ಕಾರಣಾಂತರಗಳಿಂದ ಇದೀಗ ಚಂದ್ರಬಂಡಾ ಗ್ರಾಮದ ಹತ್ತಿರದಲ್ಲಿ 43 ಎಕರೆ ಭೂಮಿ ಗುರುತಿಸಲಾಗಿದ್ದು, ರಾಯಚೂರು ಉಪ ಆಯುಕ್ತರ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದೇಶ ಪ್ರಕ್ರಿಯೆ ಯಾವಾಗಿನಿಂದ ಆರಂಭ?

ಬೆಟಾಲಿಯನ್‌ಗಳಿಗೆ ಗುರುತಿಸಿರುವ ಜಾಗಗಳಲ್ಲಿ ತರಬೇತಿ, ವಸತಿ ಸೇರಿ ಎಲ್ಲಾ ಸೌಲಭ್ಯ ಸಿಬ್ಬಂದಿಗೆ ನೀಡಲಾಗುತ್ತದೆ. ಬೆಟಾಲಿಯನ್‌ಗೆ ಓರ್ವ ಕಮಾಂಡೆಂಟ್ ಸೇರಿದಂತೆ 1057ಪೊಲೀಸರ ನೇಮಕಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹುದ್ದೆಗಳಿಗೆ ಸಂಬಂಧಿಸಿ ಅಧಿಸೂಚನೆ ಇನ್ನೂ ಸಿದ್ಧಪಡಿಸಿಲ್ಲ. ಈ ಪ್ರಕ್ರಿಯೆಗೆ ಇನ್ನೂ ಒಂದೆರಡು ತಿಂಗಳು ಕಾಲ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್, ಚುನಾವಣೆ, ಪ್ರತಿಭಟನೆ ಹಾಗೂ ಗಣ್ಯರ ಕಾರ್ಯಕ್ರಮಗಳಿಗೆ ಈ ಸಿಬ್ಬಂದಿ ಬಂದೋಬಸ್ತ್ ನೀಡುತ್ತಾರೆ.

ಬೆಟಾಲಿಯನ್ ಏನು ಉಪಯೋಗ

ಜಿಲ್ಲೆಯಲ್ಲಿ ಪ್ರಸ್ತುತವಾಗಿ 310 ಸಶಸ್ತ್ರ ಪಡೆ ಸಿಬ್ಬಂದಿಗಳು ಹಾಗೂ 28 ಠಾಣೆಗಳ ಪೈಕಿ 1020 ಕೆಎಸ್‌ಆರ್‌ಪಿನ ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕಲಬುರಗಿ ಹಾಗೂ ಕೊಪ್ಪಳ ಮುನಿರಾಬಾದ್ ಹಾಗೂ ವಿಜಯಪುರದಿಂದ ಪೊಲೀಸರನ್ನು ಕರಿಸಬೇಕಾಗುತ್ತಿತ್ತು. ಇದೀಗ ರಾಯಚೂರಿನಲ್ಲಿ 13 ನೇ ಬೆಟಾಲಿಯನ್ ಸ್ಥಾಪನೆ ಮಾಡಿದರೆ ಗಲಭೆ ಅಥವಾ ದಂಗೆಗಳಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅನುಕೂಲ. ಅಗತ್ಯವಿದ್ದಾಗ ವಿಐಪಿಗಳ ಭದ್ರತೆ, ಗಲಭೆ ನಿಯಂತ್ರಣ, ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯಗಳಲ್ಲಿ ತೊಡಗಲು ಸಾಹಯವಾಗುವುದರ ಜತೆಗೆ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ.

ರಾಯಚೂರಿನಲ್ಲಿ 13ನೇ ಕರ್ನಾಟಕ ಮೀಸಲು ಪಡೆ ಬೆಟಾಲಿಯನ್ ನಿರ್ಮಾಣ ಮಾಡಲು ತಾಲೂಕಿನ ಚಂದ್ರಬಂಡಾ ಗ್ರಾಮದ ಹತ್ತಿರದಲ್ಲಿ 43 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2 ತಿಂಗಳಿನಲ್ಲಿ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದೇವೆ. ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net