ಬಿಜೆಪಿಯದ್ದು ತಾರತಮ್ಯ ಧೋರಣೆ

dj clk citu
Published on

ಚಳ್ಳಕೆರೆ: ಕಳೆದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ತಾರತಮ್ಯ ಧೋರಣೆಯಿಂದ ಎಪಿಎಂಸಿ ಹಮಾಲರಿಗೆ ನಿವೇಶನ ಕೊಡಿಸುವಲ್ಲಿ ನ್ಯಾಯ ದೊರೆಯಲಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಬೇಸರ ವ್ಯಕ್ತಪಡಿಸಿದರು.

ಹಮಾಲಿ ಕಾರ್ಮಿಕರ ಒಕ್ಕೂಟ ಮತ್ತು ಸಿಐಟಿಯು ಸಂಘಟನೆ ಸಹಯೋಗದಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2013ರಿಂದ ಎಪಿಎಂಸಿ ಹಮಾಲರಿಗೆ ನಿವೇಶನ ಮಂಜೂರಾತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಯೋಜನೆಗಳು ಜಾರಿ ಹಂತಕ್ಕೆ ಅವಕಾಶವಾಗಿತ್ತು. ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಮಾಡಲಾಯಿತು.

2013ರ ಸಿದ್ದರಾಮಯ್ಯ ಆಡಳಿತದಲ್ಲಿ ರಸ್ತೆ ವಿಸ್ತರಣೆ, ಮಿನಿ ವಿಧಾನಸೌಧ, ಶೈಕ್ಷಣಿಕ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು. ಆದರೆ, ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿತು ಎಂದು ದೂರಿದರು.

ಸರ್ಕಾರದ ಹಂತದಲ್ಲಿ ಹಮಾಲಿ ಕಾರ್ಮಿಕರ ಬಹುವರ್ಷಗಳ ಬೇಡಿಕೆಯಾಗಿರುವ ನಿವೇಶನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ಅರ್ಹರಿಗೆ ಹಂಚಿಕೆ ಮಾಡಿಸುವುದಾಗಿ ಭರವಸೆ ನೀಡಿದರು.

ಎಪಿಎಂಸಿ ಮಾರುಕಟ್ಟೆಯ ಹಮಾಲರ ಮುಖಂಡ ಮಲಿಯಪ್ಪ ಮಾತನಾಡಿ, ಕೂಲಿ ಕಾರ್ಮಿಕರು ಮತ್ತು ಜನ ವಿರೋಧಿ ಕೋಮುವಾದ ಆಡಳಿತ ನಡೆಸಿದ ಬಿಜೆಪಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ.

ಜಾತಿ, ಧರ್ಮ ಸಂಘರ್ಷದಲ್ಲೇ ಕಾಲ ಕಳೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಲೋಕಸಭಾ ಚುನಾವಣೆಯಲ್ಲೂ ಸೋಲು ಖಚಿತ ಎಂದರು.

ಕೆಪಿಸಿಸಿ ಕರಕುಶಲ ವಿಭಾಗ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎನ್.ಜಯರಾಮ್, ತಾಪಂ ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್, ವಂದನಾರಾಜು,

ಟಿ.ನಿಂಗಣ್ಣ,ಟಿ.ತಿಪ್ಪೇಸ್ವಾಮಿ, ಮಲ್ಲಪ್ಪ, ರಾಜಣ್ಣ, ನಾಗರಾಜ, ಶಿವಣ್ಣ, ಓಬಯ್ಯ, ವೆಂಕಟೇಶ್, ಪ್ರಭು, ನಾಗರಾಜ್, ಜಯರಾಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net