ದಿಕ್ಕಿಲ್ಲದಂತಾದ ಮದಕರಿ ನಾಯಕರ ಸಮಾಧಿ

dj myk samadhi
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಕೋಟೆ ಕೊತ್ತಲು, ಕೆರೆ ಕಟ್ಟೆ, ಕುಡಿವ ನೀರಿನ ಪುಷ್ಕರಣಿ, ದೇವಸ್ಥಾನ ಸೇರಿದಂತೆ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಕಟ್ಟಿಸುವುದರೊಂದಿಗೆ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ರಾಜ ಹಿರೇ ಮದಕರಿ ನಾಯಕನ ಸಮಾಧಿ ಸ್ಥಳ ಪಾಳು ಬಿದ್ದಿದೆ.

ರಾಜವೀರ ಹಿರೇಮದಕರಿ ನಾಯಕರಿಗೂ ಹಾಗೂ ಹರಪನಹಳ್ಳಿ ಪಾಳೇಗಾರ ರಾಜ ಸೋಮಶೇಖರ ನಾಯಕನಿಗೂ ಮಾಯಕೊಂಡ ತಿಮ್ಮಪ್ಪನ ಗುಡ್ಡದ ಬಳಿ ರಣ ಭೀಕರ ಕದನವಾಗಿ ಹಿರೇ ಮದಕರಿ ನಾಯಕ ವೀರ ಮರಣ ಅಪ್ಪುತ್ತಾರೆ. ಆದ್ದರಿಂದ ಅವರ ಸಮಾಧಿಯನ್ನು ಮಾಯಕೊಂಡದಲ್ಲಿ ನಿರ್ವಿುಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಆ ಸ್ಥಳ ಇಂದು ಕೊಚ್ಚೆ ಗುಂಡಿಯಂತಾಗಿದೆ.

ಗ್ರಾಮದಲ್ಲಿ ಹಾದು ಹೋಗಿರುವ ಹೊಸದುರ್ಗ- ದಾವಣಗೆರೆ ಮುಖ್ಯರಸ್ತೆಯಿಂದ ಸಮಾಧಿ ಸ್ಥಳಕ್ಕೆ ತೆರಳುವ ಮಾರ್ಗ ಕಿರಿದಾಗಿದ್ದು ಕುಡುಕರಿಗೆ ಅನುಕೂಲಕರವಾಗಿದೆ. ಈ ರಸ್ತೆಯ ಅಕ್ಕಪಕ್ಕದ ಬದಿಗಳಲ್ಲಿ ಮದ್ಯದ ಬಾಟಲಿ ಸೇರಿದಂತೆ ಕಸದ ರಾಶಿ ಬಿದ್ದಿದೆ.

ಹೆಸರಿಗಷ್ಟೇ ಜಿಲ್ಲಾ ಪ್ರವಾಸೋದ್ಯಮ ಸ್ಥಳ: ಜಿಲ್ಲಾಡಳಿತ ಗುರುತಿಸಲ್ಪಟ್ಟಿರುವ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳಲ್ಲಿ ಇಲ್ಲಿನ ಮದಕರಿ ನಾಯಕ ಸಮಾಧಿ ಸ್ಥಳವೂ ಸೇರಿದೆ. ಯಾವೊಬ್ಬ ಜಿಲ್ಲಾ ಅಧಿಕಾರಿಯೂ ಇಲ್ಲಿಗೆ ಭೇಟಿ ನೀಡಿ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು ಹಾಗೂ ನಾಯಕ ಸಮಾಜದ ಮುಖಂಡರು.

ಸಮಾಧಿ ಜೀಣೋದ್ಧಾರ ಮತ್ತು ಅಭಿವೃದ್ಧಿ ಮಾಡುವ ಬಗ್ಗೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಗಮನಹರಿಸಿಲ್ಲ. ಸಮಾಧಿ ಸ್ಥಳಕ್ಕೆ ಹೋಗುವ ದ್ವಾರದ ಕಮಾನಿನಲ್ಲಿ ನಾಮಫಲಕ ಬರೆಸದ ಕಾರಣ ಪರ ಸ್ಥಳದಿಂದ ಬಂದವರಿಗೆ ತೊಂದರೆಯಾಗುತ್ತಿದೆ.

ಸಮಾಧಿ ಅಗೆದು ಅಪಮಾನ: 2012ರ ಅಕ್ಟೋಬರ್ ನಲ್ಲಿ ಕೆಲ ಕಿಡಿಗೇಡಿಗಳು ನಿಧಿ ಆಸೆಗೆ ವಾಮಾಚಾರ ಮಾಡಿ ಸಮಾಧಿ ಅಗೆದು ವಿರೂಪಗೊಳಿಸಿದ್ದರು. ಈ ವಿಚಾರವಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ ಸೇರಿದಂತೆ ನಾಯಕ ಸಮಾಜದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜೀಣೋದ್ಧಾರಕ್ಕೆ ಮನವಿ ಮಾಡಿದ್ದರು.

ಕಳೆದ ಎರಡು ವರ್ಷದ ಹಿಂದೆ ಸುರಿದ ಮಳೆಯಿಂದ ಸಮಾಧಿ ಸುತ್ತ ಇರುವ ಕಾಂಪೌಂಡ್ ಕುಸಿದಿದೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಾಗ ತಹಸೀಲ್ದಾರ್, ತಾಪಂ ಇಒ, ಪ್ರವಾಸೋದ್ಯಮ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ 2 ವರ್ಷ ಕಳೆದರೂ ಕಾಂಪೌಂಡ್ ಮರು ನಿರ್ವಣವಾಗಿಲ್ಲ.

ಶಾಸಕರು ಸ್ಥಳ ಅಭಿವೃದ್ಧಿಗೆ ಗಮನಹರಿಸಲಿ: ಪ್ರಸ್ತುತ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಮಾಧಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಭಿವೃದ್ಧಿಗೆ 5 ಕೋಟಿ ರೂ. ಹಣವನ್ನು ಮಂಜೂರಾತಿ ಮಾಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಇಲ್ಲಿಯವರೆಗೂ ಅದು ಈಡೇರಿಲ್ಲ. ಒಟ್ಟಾರೆ ನಾಯಕರ ಸಮಾಧಿ ಸ್ಥಳಕ್ಕೆ ಯಾವಾಗ ಕಾಯಕಲ್ಪ ಸಿಗುತ್ತದೆ ಕಾದು ನೋಡಬೇಕು ಎನ್ನುತ್ತಾರೆ ಸಾರ್ವಜನಿಕರು.

ರಾಜ ಹಿರೇಮದಕರಿ ನಾಯಕ ಸಮಾಧಿ ಸ್ಥಳ ಹೆಸರಿಗಷ್ಟೇ ಜಿಲ್ಲಾ ಪ್ರವಾಸಿ ತಾಣ, ಆದರೆ ಸ್ಥಳ ಸಂಪೂರ್ಣ ಪಾಳು ಬಿದ್ದಿದೆ. ಇದು ಮಹನೀಯರಿಗೆ ಮಾಡಿರುವ ಘೊರ ಅವಮಾನ. ಶಾಸಕರು, ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಭದ್ರತೆ ಕುರಿತು ಗಮನಹರಿಸಬೇಕು. | ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ ರಾಜನಹಳ್ಳಿ. ಹಿರೇಮದಕರಿ ನಾಯಕ ಸಮಾಧಿ ಸ್ಥಳದ ಕಾಂಪೌಂಡ್ ಕುಸಿದು 2 ವರ್ಷವಾದರೂ ದುರಸ್ತಿ ಮಾಡಿಸದಿರುವುದು ನಿಜಕ್ಕೂ ದುರಂತ. ಇನ್ನೊಂದು ವಾರದಲ್ಲಿ ಭದ್ರತೆ ಮತ್ತು ಸ್ವಚ್ಛತೆಗೆ ಮುಂದಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಶನ ಕೈಗೊಳ್ಳಲಾಗುವುದು. | ಜಿ.ಎಲ್.ಸುನಿಲ್, ಮದಕರಿ ನಾಯಕ ಸಮಾಧಿ ಸ್ಥಳದ ಜೀಣೋದ್ಧಾರ ಸಮಿತಿ ಅಧ್ಯಕ್ಷ. ಸ್ಥಳೀಯ ಶಾಸಕರು, ಪುರಾತತ್ವ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಅನುದಾನಗಳಿಲ್ಲ ಎನ್ನುವ ನೆಪವೊಡ್ಡಿ ಕೈಕಟ್ಟಿ ಕೂರದೆ ಈ ಕೂಡಲೇ ಅಭಿವೃದ್ಧಿಗೆ ಮುಂದಾಗಬೇಕು. | ಕೆ.ರಂಗಸ್ವಾಮಿ, ನಿವೃತ್ತ ಹಿರಿಯ ಪ್ರಾಧ್ಯಾಪಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net