

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನ ಮಡಾಮಕ್ಕಿಯನ್ನು ಸಂಪರ್ಕಿಸುವ ಹುತ್ರುಬೈಲು ಹಾಗೂ ಕಾನ್ಬೆಟ್ಟುಜೆಡ್ಡು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯರೇ ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಭಾನುವಾರ ದುರಸ್ತಿ ಪಡಿಸಿದರು.
ಕಂಚರಕಾಳು ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ, ಮಡಾಮಕ್ಕಿಯಿಂದ ಹೆಬ್ರಿ ಸಂಪರ್ಕಿಸುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಮನಗಂಡ ಸ್ಥಳೀಯರು ಸ್ವಂತ ಖರ್ಚಿನಲ್ಲಿ ಬೃಹತ್ ಗಾತ್ರದ ಗುಂಡಿಗಳನ್ನು ವೆಟ್ ಮಿಕ್ಸ್, ಕಲ್ಲು ಹಾಕಿ ವಾಹನ ಓಡಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿದರು. ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ನೀರಾವರಿಯವರು ಕ್ರಮ ವಹಿಸಿಲ್ಲ: ರಸ್ತೆ ಪ್ರಮುಖವಾಗಿ ನೀರಾವರಿ ಪೈಪ್‌ಲೈನ್ ಕಾಮಗಾರಿಯಿಂದ ಹಾಳಾಗಿದೆ. ಹೆಬ್ರಿ ತಾಲೂಕು ಪಂಚಾಯಿತಿ ಇಒ ವಿಜಯ ಅವರು ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ ಎಂದಿದ್ದರು, ಯಾವುದೇ ಕ್ರಮವಾಗಿಲ್ಲ. ದೊಡ್ಡ ಗಾತ್ರದ ಗುಂಡಿಗಳು ಬೀಳಲು ನೀರಾವರಿ ಪೈಪ್‌ಲೈನ್ ಕಾರಣವಾಗಿದೆ.
ರಸ್ತೆ ದುರಸ್ತಿ ಕಾರ್ಯದಲ್ಲಿ ಮಹೇಶ್ ಶೆಟ್ಟಿ ಕಾನ್ಬೆಟ್ಟು, ಮಹೇಶ್ ಶೆಟ್ಟಿ ಬಾದ್ಲು, ಆದರ್ಶ ಶೆಟ್ಟಿ, ಪ್ರಜೇಶ್ ಶೆಟ್ಟಿ, ದೀಕ್ಷಿತ್ ನಾಯ್ಕ, ಬ್ರಿಜೇಶ್ ಶೆಟ್ಟಿ, ಅಶ್ವಥ್ ಶೆಟ್ಟಿ, ಉದಯ್ ನಾಯ್ಕ, ಅಭಿಲಾಷ್ ನಾಯ್ಕ, ಗಣೇಶ್ ಪಾಲ್ಗೊಂಡಿದ್ದರು.
ಸ್ಥಳೀಯರೆಲ್ಲ ಸೇರಿ ರಸ್ತೆ ದುರಸ್ತಿ ಮಾಡಿದ್ದೇವೆ. ಮಡಾಮಕ್ಕಿಯಿಂದ ಬರುವ ವಾಹನಗಳು ಸದ್ಯಕ್ಕೆ ಇದೇ ರಸ್ತೆಯನ್ನು ಆಶ್ರಯಿಸಿದ್ದು, ಸವಾರರು ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ರಸ್ತೆ ದುರಸ್ತಿ ಮಾಡಿದ್ದೇವೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ದುರಸ್ತಿ ಮಾಡುವ ಬಗ್ಗೆ ತಿಳಿಸಿದ್ದು, ಅನುಮೋದನೆ ಸಿಗಬೇಕಾಗಿದೆ. ಮಹೇಶ್ ಶೆಟ್ಟಿ ಕಾನ್ಬೆಟ್ಟು, ಗ್ರಾಪಂ ಸದಸ್ಯರು, ಕುಚ್ಚೂರು. https://www.vijayavani.net/mock-funeral-procession-protest-by-chanting-bhajans https://www.vijayavani.net/bjp-curtails-panchayat-rights