ಬಾಂದಾರ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

Bandara
Published on

ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಲಸಿನ ಬಳಿ ನಿರ್ಮಿಸಲು ಉದ್ದೇಶಿರುವ ಬಾಂದಾರಿನಿಂದ ಇಲ್ಲಿಯ ಕೃಷಿ ಭೂಮಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದು ಅಳಲು ತೋಡಿಕೊಂಡ ಗ್ರಾಮಸ್ಥರು, 2020-21ನೇ ಸಾಲಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬಾಂದಾರು ಕಾಮಗಾರಿ ಮಂಜೂರಾಗಿತ್ತು. ಇಲ್ಲಿಯ ಅಡಕೆಕಾಯಿಜಡ್ಡಿ ಗ್ರಾಮದಲ್ಲಿ ಬಾಂದಾರು ನಿರ್ಮಿಸಲು ಸ್ಥಳ ಗುರುತಿಸಲಾಗಿತ್ತು. ಆದರೆ, ಮಳೆಗಾಲದಲ್ಲಿ ಅಘನಾಶಿನಿ ನದಿಯ ಈ ಉಪ ನದಿ ಉಕ್ಕಿ ಹರಿಯುವುದರಿಂದ ಇಲ್ಲಿಯ ಕೃಷಿ ಭೂಮಿಗಳಿಗೆ ನೀರು ನುಗ್ಗುವ ಆತಂಕದಿಂದ ಅಸಮಾಧಾನ ವ್ಯಕ್ತಪಡಿಸಿದ್ದೆವು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಾಂದಾರು ಸೇತುವೆ ನಿರ್ಮಿಸುವುದನ್ನು ಕೈ ಬಿಟ್ಟಿತ್ತು. ಈಗ ಜಾಗ ಬದಲಿಸಿ ಹೆಬ್ಬಲಸಿನ ಬಳಿ ನಿರ್ಮಿಸಲು ಉದ್ದೇಶಿಸಿದ್ದು, ಇಲ್ಲಿ ಇನ್ನೂ ಹೆಚ್ಚಿನ ಹಾನಿ ಆಗುವ ಸಾಧ್ಯತೆ ಇದೆ. ಸಣ್ಣ ನೀರಾವರಿ ಇಲಾಖೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಿರ್ಮಿಸುತ್ತಿಲ್ಲ ಎಂದರು.

ಬಾಂದಾರು ನಿರ್ಮಾಣದ ಸಲುವಾಗಿ ಇಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಅವೈಜ್ಞಾನಿಕ ಮತ್ತು ಸ್ಥಳೀಯರಿಗೆ ಅವಶ್ಯವಿಲ್ಲದ ಜಾಗದಲ್ಲಿ ಬಾಂದಾರು ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಹೊಳೆಯಲ್ಲಿ ನೆರೆ ಬಂದಾಗ ಮನೆ, ತೋಟಗಳಿಗೆ ನೀರು ನುಗ್ಗುತ್ತದೆ. ಇಲ್ಲಿ ಜಾಗ ಇಕ್ಕಟ್ಟಾಗಿದ್ದು, ಪ್ರವಾಹವೂ ರಭಸದಿಂದಿರುತ್ತದೆ. ನಿರ್ಮಾಣ ಮಾಡುತ್ತಿರುವ ಬಾಂದಾರು ತೋಟಕ್ಕೆ ಮೀಸಲಿಟ್ಟ ಬೆಟ್ಟ ಜಾಗ ಮತ್ತು ಕೇಶವ ಪಟಗಾರ ಸೇರಿದ ಮಾಲ್ಕಿ ಜಾಗ ಸ.ನಂ. 52 ರಲ್ಲಿ ಬರುತ್ತದೆ. ಈ ಜಾಗವನ್ನು ಆಕ್ರಮಿಸಿ, ಬೆಳೆನಾಶಕ್ಕೆ ಅವಕಾಶ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಕೃಷಿ ಭೂಮಿ ನಾಶಪಡಿಸಬಹುದಾದ ಬಾಂದಾರು ನಮಗೆ ಅವಶ್ಯಕತೆಯಿಲ್ಲ ಎಂದರು.

ಗ್ರಾಪಂ ಸದಸ್ಯ ಚಂದ್ರಕಾಂತ ಹೆಗಡೆ, ಸ್ಥಳೀಯರಾದ ಗಣಪತಿ ಭಟ್, ಶ್ರೀಪಾದ ಭಟ್ ಹೆಬ್ಬಲಸು, ಕುಮಾರ ಪಾವಸ್ಕರ, ದತ್ತಾತ್ರೇಯ ಜೋಶಿ, ಉಮೇಶ ಹೆಗಡೆ ನೇರ್ಲವಳ್ಳಿ, ವೆಂಕಟರಮಣ ಹೆಗಡೆ ಸಪ್ಪುರ್ತಿ, ಗಣಪತಿ ಹೆಗಡೆ ನೇರ್ಲದ್ದ, ಶ್ರೀಕಾಂತ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net