ಹೆದ್ದಾರಿಯಲ್ಲಿನ ಲೋಪಗಳ ಗಮನ ಸೆಳೆದ ಸ್ಥಳೀಯರು, ಪರಿಹಾರ ಕೆಲಸಗಳಿಗೆ ಆದೇಶಿಸಿದ ಡಿಸಿ

IMG_20241025_204640.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ  ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ  ಹೆದ್ದಾರಿ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅಪಘಾತಗಳನ್ನು ತಡೆದು, ಅಮಾಯಕ ಜೀವಗಳನ್ನು ಕಾಪಾಡಬೇಕು.‌ ಇದಕ್ಕೆ ಹೆದ್ದಾರಿಗಳಲ್ಲಿನ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದರು.‌

ಜಿಲ್ಲಾ ರೇಷ್ಮೆ ಹಿತ ರಕ್ಷಣಾ ವೇದಿಕೆ ಸಂಚಾಲಕ  ಯಲುವಹಳ್ಳಿಸೊಣ್ಣೇಗೌಡ ಮಾತನಾಡಿ, ಬೀಡಗಾನಹಳ್ಳಿ ಬಳಿ ಚರಂಡಿಯು ಕಿರಿದಾಗಿದ್ದು ಸರಾಗವಾಗಿ ನೀರು ಹರಿದುಹೋಗುತ್ತಿಲ್ಲ. ಸಂಚಾರಕ್ಕೆ ಪರದಾಡುವಂತಾಗಿದೆ.‌ ಇದಕ್ಕೆ  ಅಗಲೀಕರಣ ಮತ್ತು ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕೋಲಾರ ಮತ್ತು ನಂದಿಬೆಟ್ಟ, ನಂದಿ ಮುದ್ದೇನಹಳ್ಳಿ ಕಡೆಗೆ ತೆರಳಲು ಅನುಕೂಲವಾಗುವಂತೆ ನಂದಿಕ್ರಾಸ್ ಬಳಿ ಬೆಂಗಳೂರು ಕಡೆಗೆ ಏರುಮುಖ ಮತ್ತು ಇಳಿಮುಖ ಸಂಪರ್ಕ ರಸ್ತೆ ನಿರ್ಮಿಸಬೇಕು.‌ ಕೆಳ ಸೇತುವೆ ಬಳಿ ಚರಂಡಿ ಅಗಲೀಕರಣವಾಗವೇಕು.‌
ಚದಲುಪರ ಕ್ರಾಸ್ ಬಳಿ  ಸರ್ವೀಸ್ ರಸ್ತೆ ದುರಸ್ತಿ ಪಡಿಸಿ,  ಎಚ್ಚರಿಕೆ ಫಲಕ ಅಳವಡಿಸಬೇಕು. ಮಹಿಳಾ ಕಾಲೇಜು ಮೇಲುಸೇತುವೆಯ ಪಶ್ಚಿಮದ ಕಡೆ ಸರ್ವೀಸ್ ರಸ್ತೆಯ ಅಗತ್ಯವಿದೆ.  ಹೊನ್ನೇನಹಳ್ಳಿ ಬಳಿ ಹೆಚ್ಚಿಗೆ  ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ ಮಾತನಾಡಿ, ಹೊನ್ನೇನಹಳ್ಳಿ ಸಮೀಪದ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಬಿಎಡ್ ಕಾಲೇಜ್,  ಮೆಡಿಕಲ್ ಕಾಲೇಜು ಬಳಿ ಮೇಲು ಸೇತುವೆ ನಿರ್ಮಿಸಲು ಒತ್ತಾಯಿಸಿದರು.
ಸಭೆಯಲ್ಲಿ ತಾ.ಪಂ.ಮಾಜಿ ಉಪಾಧ್ಯಕ್ಷ ಕೆ.ಆರ್.ರೆಡ್ಡಿ, ಮುಖಂಡರಾದ ಮಳ್ಳೂರು ಶಿವಣ್ಣ, ಕೆ.ಎಂ.ರೆಡ್ಡಪ್ಪ, ಮೇಲೂರು ಅಮರ್, ಮುನಿರಾಜು, ಚಂದ್ರಪ್ಪ ಮತ್ತಿತರರು ಇದ್ದರು.

*ಗಮನ ಸೆಳೆದಿದ್ದ ಮುಖಂಡರು*
ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕಾಮಗಾರಿ, ಅಪಘಾತ ವಲಯಗಳು ಮತ್ತು ಪರಿಹಾರ ಕೆಲಸಗಳ ಬಗ್ಗೆ
ನಾಗರಿಕ ಹಿತರಕ್ಷಣಾ ಸಮಿತಿಯು ಜಿಲ್ಲಾಡಳಿತದ ಗಮನ ಸೆಳೆದಿತ್ತು.
ಮನವಿ ಪತ್ರ ಸಲ್ಲಿಕೆ, ರಸ್ತೆಯಲ್ಲಿ ಪ್ರತಿಭಟನೆಯ ಮೂಲಕ ಸಹ ಬೆಳಕು ಚೆಲ್ಲಲಾಗಿತ್ತು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ  ಪ್ರಾಧಿಕಾರ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. ಸಮಿತಿಯ ಪದಾಧಿಕಾರಿಗಳು ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಸಮಸ್ಯೆಗಳ ವರದಿಯನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net