ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಅಹವಾಲು ಸಭೆ

Gangavati Lokayukta Sabe
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆಗಳು ಮತ್ತು ಅಹವಾಲುಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಲಾಯಿತು.
Published on

ಗಂಗಾವತಿ: ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸಲು ಅಹವಾಲು ಸಭೆ ಆಯೋಜಿಸಲಾಗುತ್ತಿದ್ದು, ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಎಂದ ಲೋಕಾಯುಕ್ತ ಡಿವೈಎಸ್ಪಿ ಸಲೀಂಪಾಶಾ.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆಗಳು ಮತ್ತು ಅಹವಾಲುಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇಲಾಖೆ ಸೇವೆ ಮತ್ತು ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ದೂರುಗಳು ಬರುತ್ತಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು.

ಕಾಲಮಿತಿಯೊಳಗೆ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಬೇಕಿದ್ದು, ವಿಳಂಬಕ್ಕೆ ಅವಕಾಶ ನೀಡಬಾರದು. ಸರ್ಕಾರ ರೂಪಿಸಿದ ನಿಯಮಾವಳಿಯಂತೆ ಸಕಾಲಕ್ಕೆ ದೂರುಗಳನ್ನು ಇತ್ಯರ್ಥಗೊಳಿಸಬೇಕು.

ಹಲವು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿರುವ ದೂರುಗಳ ಇತ್ಯರ್ಥಕ್ಕಾಗಿ ತಾಲೂಕುಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗುವುದು.

ಅಹವಾಲು ಸ್ವೀಕಾರ

ಸಭೆಯಲ್ಲಿ ಅಬಕಾರಿ, ಗ್ರಾಪಂ, ನಗರಸಭೆ, ಆಹಾರ ಇಲಾಖೆ ಸೇರಿ ವಿವಿಧ ಇಲಾಖೆಗಳ ದೂರುಗಳ ಸಲ್ಲಿಕೆಯಾಗಿದ್ದು, ಕೆಲವೊಂದನ್ನು ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಯಿತು. ದೂರುಗಳ ವಿಲೇವಾರಿಯಲ್ಲಿ ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳಿಗೂ ಕ್ರಮದ ಬಗ್ಗೆ ಸೂಚನೆ ನೀಡಿದರು.

ಲೋಕಾಯುಕ್ತ ಪಿಐಗಳಾದ ರಾಜೇಶ ಬಟಗುರ್ಕಿ, ಚಂದ್ರಪ್ಪ ಈಟಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಲಕ್ಷ್ಮಿದೇವಿ ಯಾದವ್, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಗ್ರಾಮೀಣ ಪಿಐಎನ್.ಮಂಜುನಾಥ ಸೇರಿ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಲು ಲೋಕಾಯುಕ್ತ ಹೆಸರಿನಲ್ಲಿ ಮೊಬೈಲ್ ಕರೆಗಳು ಬರುತ್ತಿದ್ದು, ಯಾವುದೇ ಅಧಿಕಾರಿಗಳು ಕರೆಗಳಿಗೆ ಕಿವಿಗೊಡಬಾರದು ಎಂದು ಡಿವೈಎಸ್ಪಿ ಸಲೀಂಪಾಶಾ ಹೇಳಿದರು.

ಇನ್ನೂ ಮುಂದೆ ಲೋಕಾಯುಕ್ತ ಹೆಸರಿನಲ್ಲಿ ಯಾವುದೇ ಕರೆ ಬಂದರೂ ಸ್ಥಳೀಯ ಠಾಣೆಗೆ ದೂರು ನೀಡಬೇಕು. ಮಹಾರಾಷ್ಟ್ರ ಮೂಲ ವ್ಯಕ್ತಿಯೊಬ್ಬರು ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡುತ್ತಿರುವ ಗಮನಕ್ಕೆ ಬಂದಿದೆ ಎಂದರು.

ದೀರ್ಘಕಾಲದ ದೂರುಗಳಿದ್ದರೆ ಕಾಲಮಿತಿಯೊಳಗೆ ಇರ್ತ್ಯಗೊಳಿಸಬೇಕಿದ್ದು, ವಿಳಂಬಕ್ಕೆ ಅವಕಾಶ ನೀಡಬಾರದು. ಸ್ಥಳೀಯ ಮಟ್ಟದಲ್ಲಿ ಇತ್ಯರ್ಥವಾಗುವ ಸಮಸ್ಯೆಗಳನ್ನು ಕಚೇರಿಯಲ್ಲಿ ಬಗೆಹರಿಸಿ. | ಸಲೀಂಪಾಶಾ, ಡಿವೈಎಸ್ಪಿ, ಲೋಕಾಯುಕ್ತ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net