ಅವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

IMG-20240502-WA0176
Published on

ಹಾಸನ: ಆಲೂರು ಪಟ್ಟಣದ ಮೂರನೇ ವಾರ್ಡಿನಲ್ಲಿರುವ ರಸ್ತೆ ಬದಿಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ತಾಂತ್ರಿಕವಾಗಿ ಪರಿಶೀಲನೆ ಮಾಡಿ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.


ಆಲೂರು-ಬಿಕ್ಕೋಡು ರಸ್ತೆ ಬದಿಯಲ್ಲಿ ಇಲ್ಲಿಯವರೆಗೂ ಚರಂಡಿ ನಿರ್ಮಾಣ ಮಾಡಿಲ್ಲ. ಕೆಲವೆಡೆ ನಿರ್ಮಾಣ ಮಾಡಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಕೊಳಚೆ ನೀರು ಹರಿಯದೆ ಅಲ್ಲಲ್ಲಿ ನಿಲ್ಲುತ್ತಿರುವುದರಿಂದ ವಾಸನೆ ಬರುತ್ತಿದೆ. ಈ ಪ್ರದೇಶದ ನಿವಾಸಿಗಳು ಸೊಳ್ಳೆ ಕಾಟಕ್ಕೆ ಬೇಸತ್ತಿದ್ದಾರೆ.

ನಿಯಮಾನುಸಾರವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲ ತೆರಿಗೆ ಪಾವತಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದರೂ, ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಚರಂಡಿ ನಿರ್ಮಾಣ ಮಾಡುವ ಮೊದಲು ತಾಂತ್ರಿಕವಾಗಿ ಪರಿಶೀಲನೆ ನಡೆಸಿ, ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮತ್ತು ಮೋರಿಗಳನ್ನು ನಿರ್ಮಾಣ ಮಾಡಬೇಕು ಎಂದು ನಿವಾಸಿ ನ್ಯಾಯಾಲಯ ಸಿಬ್ಬಂದಿ ಮೋಹನ್ ಆಗ್ರಹಿಸಿದ್ದಾರೆ.

ತಾಂತ್ರಿಕ ತೊಂದರೆಯಿಂದಾಗಿ ಸದ್ಯ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸಂಪರ್ಕ ರಸ್ತೆಗೆ ಮೋರಿ ನಿರ್ಮಾಣ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. 14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್ ಕವಿತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net