

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜ.17ರಂದು ನಡೆದಿದ್ದ ದರೋಡೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪ್ರಮುಖ ಸ್ಥಳೀಯ ಸೂತ್ರಧಾರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ಆರಕ್ಕೇರಿದೆ.
ಬಂಟ್ವಾಳ ಕನ್ಯಾನ ನಿವಾಸಿ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ (69) ಹಾಗೂ ತಲಪಾಡಿ ಕೆ.ಸಿ. ರೋಡ್ ಶಾಜ್ ಕಾಟೇಜ್ ನಿವಾಸಿ ಮಹಮ್ಮದ್ ನಝೀರ್ (65) ಬಂಧಿತರು. ಭಾಸ್ಕರ್ ಬೆಳ್ಚಪಾಡನನ್ನು ಬೆಂಗಳೂರು ರೈಲ್ವೇ ನಿಲ್ದಾಣ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ ಆತ ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಮಹಮ್ಮದ್ ನಜೀರ್ ಜತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ದರೋಡೆ ಮಾಡಲು ಸುಮಾರು 6 ತಿಂಗಳುಗಳಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ಕೃತ್ಯ ಎಸಗಿದ್ದ.
ಸ್ಥಳೀಯ ಸೂತ್ರಧಾರ
ದರೋಡೆ ಪ್ರಕರಣದಲ್ಲಿ ಭಾಸ್ಕರ್ ಬೆಳ್ಚಪಾಡನೊಂದಿಗೆ ಮಹಮ್ಮದ್ ನಝೀರ್‌ನು ಸಂಚಿನಲ್ಲಿ ಪಾಲ್ಗೊಂಡಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡವನ್ನು ಆರೋಪಿಗಳಿಗೆ ತೋರಿಸಿಕೊಟ್ಟಿದ್ದ. ಡಕಾಯತಿ ನಡೆಸಬೇಕಾದ ದಿನ, ವೇಳೆ ಹಾಗೂ ಸೊಸೈಟಿಯಲ್ಲಿರುವ ಸಿಬ್ಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಸ್ಥಳೀಯ ಮಾಹಿತಿಯನ್ನು ಮಹಮ್ಮದ್ ನಝೀರ್ ಇತರ ಆರೋಪಿಗಳಿಗೆ ನೀಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಸಂಚು ರೂಪಿಸಿದಂತೆಯೇ ಕೃತ್ಯ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪೊಲೀಸರು ತಕ್ಷಣದಿಂದಲೇ ಹಲವು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಿಸಿದ್ದರು. ಮುಂಬೈಯ ಪ್ರಮುಖ ಆರೋಪಿಗಳನ್ನು ಬಂಧಿಸಿ, ದರೋಡೆಗೈದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿ ಭಾಗಿಯಾಗಿರುವುದು ಘಟನೆ ನಡೆದ ದಿನದಿಂದಲೇ ಪೊಲೀಸರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಶಂಕೆ ಇತ್ತು. ಪ್ರಮುಖ ಆರೋಪಿಗಳು ಬಂಧನವಾಗಿ ಅವರ ವಿಚಾರಣೆಯಿಂದ ಸ್ಥಳೀಯ ಆರೋಪಿಗಳು ಯಾರು ಎಂಬುದು ಗೊತ್ತಾಗಿತ್ತು. ಆದರೆ ಅವರು ಜಾಗ ಬದಲಿಸುತ್ತಾ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಪತ್ತೆ ಮಾಡುವುದು ವಿಳಂಬವಾಗಿದೆ.
ಭಾಸ್ಕರ 25 ವರ್ಷದಿಂದ ಮುಂಬೈಯಲ್ಲಿದ್ದ
ಆರೋಪಿ ಭಾಸ್ಕರ್ ಬೆಳ್ಚಪಾಡ ಸುಮಾರು 25 ವರ್ಷಗಳಿಂದ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನವನ್ನು ಬಿಟ್ಟು ಮುಂಬೈನಲ್ಲಿ ವಾಸವಾಗಿದ್ದ. ಈತನ ವಿರುದ್ದ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
2011 ರಲ್ಲಿ ನವದೆಹಲಿಯಲ್ಲಿ ದರೋಡೆಗೆ ಪ್ರಯತ್ನದ ಪ್ರಕರಣ. 2021 ರಲ್ಲಿ ಮುಂಬೈ ಕ್ರೈಂ ಬ್ರಾಂಚ್ ಸಿ.ಐ.ಡಿ ಠಾಣಾ ವ್ಯಾಪ್ತಿಯಲ್ಲಿ ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ, 2022ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, 2022 ರಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಪ್ರಯತ್ನ ಪ್ರಕರಣ ದಾಖಲಾಗಿವೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ನಿರ್ದೆಶನದಂತೆ ಉಪ ಪೊಲೀಸ್ ಆಯುಕ್ತರಾದ ಸಿದ್ಧಾರ್ಥ ಗೋಯಲ್, ರವಿಶಂಕರ್ ಮತ್ತು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷರಾದ ಟಿ. ಡಿ ನಾಗರಾಜ್, ಪಿ.ಎಸ್.ಐಗಳಾದ ಶೀತಲ್ ಅಲಗೂರ, ಸಂತೋಷ್ ಕುಮಾರ್ ಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.