

ಸಾಗರ: ಮಹಿಳೆಯರು ಕಸೂತಿ ಮತ್ತು ಕಲಾತ್ಮಕತೆಯ ಕೆಲಸಗಳನ್ನು ಮೊದಲಿನಿಂದಲೂ ಯಶಸ್ವಿಯಾಗಿ ತೊಡಗಿಸಿಕೊಂಡು ಬಂದಿದ್ದಾರೆ. ಅವರ ತಯಾರಿಸುವ ಕೈ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದು ರಂಗಭೂಮಿ ಕಲಾವಿದೆ ತಾಜುಮಾ ಶಿಕಾರಿಪುರ ತಿಳಿಸಿದರು.
ನಗರಸಭೆ ರಂಗಮಂದಿರದಲ್ಲಿ ಶನಿವಾರ ಭೀಮನಕೋಣೆ ಚರಕ ಸಂಸ್ಥೆ ಮತ್ತು ಜೀವನ್ಮುಖಿ ಹಮ್ಮಿಕೊಂಡಿದ್ದ ‘ಅವ್ವ ಮಹಾಸಂತೆ-2023’ ಉದ್ಘಾಟಿಸಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಾವು ಗುಡಿ ಸಂಸ್ಥೆ ಮೂಲಕ ತಯಾರಿಸಿದ ಕೈ ಉತ್ಪನ್ನಗಳನ್ನು ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತೇವೆ. ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ ಎನ್ನುವ ಕೊರಗು ನಮ್ಮನ್ನು ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಅವ್ವ ಮಹಾಸಂತೆ ಮೂಲಕ ಅಂತಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಂತಹ ಮಹಾಸಂತೆಯಿಂದ ಸ್ಥಳೀಯವಾಗಿ ಉತ್ಪನ್ನ ತಯಾರಿಸುತ್ತಿರುವವರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ರೀತಿಯ ಸಂತೆಗಳನ್ನು ನಡೆಸುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ನಗರಸಭೆ ಪರಿಸರ ಸಹಾಯಕ ಅಭಿಯಂತ ಮದನ್ ಮಾತನಾಡಿ, ಮಹಿಳೆಯರಲ್ಲಿ ಸ್ವಯಂ ಉದ್ಯೋಗ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಅಗತ್ಯವಿದೆ. ಮಹಾಸಂತೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದೆ ಇರುವುದು ತುಂಬ ಸಂತೋಷ ತಂದಿದೆ. ಮಹಿಳಾ ಸಬಲೀಕರಣಕ್ಕೆ ಇಂತಹ ಕಾರ್ಯಕ್ರಮಗಳ ಅಗತ್ಯ ಹೆಚ್ಚು ಇದೆ ಎಂದರು.
ಜೀವನ್ಮುಖಿ ಸಂಸ್ಥೆ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಮಾತನಾಡಿ, ಮಹಾತ್ಮ ಗಾಂಧಿ ಅವರ ಗ್ರಾಮರಾಜ್ಯದ ಪರಿಕಲ್ಪನೆಯಲ್ಲಿ ಗುಡಿ ಕೈಗಾರಿಕೆ, ಕೂ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆ ವ್ಯವಸ್ಥಿತವಾಗಿ ನಿರ್ಮಾಣ ಆಗಬೇಕಿದೆ. ಮಹಿಳಾ ಸ್ವಯಂ ಉದ್ಯೋಗಿಗಳಿಗೆ ಆತ್ಮವಿಶ್ವಾಸ ತುಂಬಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸ್ಪಂದನ ಸಂಸ್ಥೆ ತಂಡದಿಂದ ರಂಗಗೀತೆಗಳ ಗಾಯನ ಮತ್ತು ಸಿದ್ದಿ ಕುಣಿತ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ, ವ್ಯವಸ್ಥಾಪಕ ನಿರ್ದೇಶಕ ಪೀಟರ್, ನೇಹಾ, ಪದ್ಮಶ್ರೀ, ಮಹಾಲಕ್ಷ್ಮೀ, ಎಂ.ವಿ.ಪ್ರತಿಭಾ ಇತರರಿದ್ದರು.
ವಿವಿಧ ಖಾದ್ಯಗಳ ಆಕರ್ಷಣೆ
ಅವ್ವ ಮಹಾಸಂತೆಯಲ್ಲಿ ಸಾಗರದ ಲತಾ ಅವರು ಕಾಯಿ ಹೋಳಿಗೆ, ಹಪ್ಪಳ, ಕರ್ಜಿಕಾಯಿ, ರೊಟ್ಟಿ , ಎಣಗಾಯಿ ತಯಾರಿಕೆ ಮೂಲಕ ಗಮನ ಸೆಳೆದರು. ಶಿರಸಿಯ ವಿದ್ಯಾ ನಾಯಕ ಅವರು ಪ್ರಶಾಂತಿ ಫೌಂಡೇಶನ್ ವತಿಯಿಂದ ಬಾಳೆನಾರಿನಿಂದ ಪೆನ್ ಸ್ಟ್ಯಾಂಡ್, ಕೋಟೆ ಗಮನ ಸೆಳೆದವು. ಸಾಗರದ ಅನಿತಾ ತುಪ್ಪದ ದೋಸೆ, ಉದ್ದಿನ ವಡೆ, ಮದ್ರಾಸ್ ಇಡ್ಲಿ ಮುಂತಾದವನ್ನು ತಂದಿದ್ದರು. ಸಿರವಂತೆಯ ಚಿತ್ರಸಿರಿಯಿಂದ ಹಸೆ ಚಿತ್ತಾರ ಅನಾವರಣಗೊಂಡಿತು. ಅಲಂಕಾರಿಕ ವಸ್ತುಗಳು, ಆಹಾರ ಮೇಳ, ಸಿರಿ ಧಾನ್ಯ, ಉಪ್ಪಿನಕಾಯಿ ಹಪ್ಪಳ ಸಂಡಿಗೆ. ವಿವಿಧ ಖಾದ್ಯಗಳು ಜನರನ್ನು ಆಕರ್ಷಿಸಿದವು.
ಪ್ರಬಂಧ ಸ್ಪರ್ಧೆ ವಿಜೇತರು
ಅವ್ವ ಮಹಾಸಂತೆ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಯಶಸ್ವಿನಿ ಶ್ರೀಧರಮೂರ್ತಿ ಶಿರಸಿ (ಪ್ರಥಮ), ಸಹನಾ ಕಾಂತಬೈಲ್ ಮಡಿಕೇರಿ(ದ್ವಿತೀಯ), ತುಳಸಿ ಹೆಗ್ಗೋಡು (ತೃತೀಯ) ಬಹುಮಾನ ಪಡೆದರು.