ಸ್ಥಳೀಯ ಮಿಡತೆಗಳಿಂದ ಬೆಳೆ ನಾಶವಾಗದು

28-klr-5
Published on

ವಿಜಯವಾಣಿ ಸುದ್ದಿಜಾಲ ಕೋಲಾರ

ದಿಂಬ ಹಾಗೂ ದೊಡ್ಡಹಸಾಳ ಗ್ರಾಮದಲ್ಲಿ ಕಾಣಿಸಿಕೊಂಡ ಮಿಡತೆಗಳು ಸ್ಥಳೀಯ ಮಿಡತೆಗಳಾಗಿದ್ದು, ಉತ್ತರ ಭಾರತದಲ್ಲಿ ಕಂಡು ಬಂದ ಮಿಡತೆಗಳಲ್ಲ ಎಂದು ಕೆಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳ ದಾಳಿ ರೀತಿಯಲ್ಲಿ ಜಿಲ್ಲೆಗೂ ಲಗ್ಗೆ ಇಟ್ಟಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ವಿಜ್ಞಾನಿಗಳಿಬ್ಬರು ಗುರುವಾರ ದಿಂಬ ಗ್ರಾಮಕ್ಕೆ ಭೇಟಿ ನೀಡಿ ಹೊಲ ಮತ್ತು ಗ್ರಾಮದಲ್ಲಿ ಕಾಣಿಸಿಕೊಂಡ ಮಿಡತೆಗಳ ಪರಿಶೀಲನೆ ನಡೆಸಿದರು. ಉತ್ತರ ಭಾರತಕ್ಕೆ ಪಾಕಿಸ್ತಾನದ ಕಡೆಯಿಂದ ಹಾರಿ ಬಂದಿರುವ ಮಿಡತೆಗಳಿಗೂ ಇಲ್ಲಿ ಕಂಡು ಬಂದಿರುವ ಸ್ಥಳೀಯ ಮಿಡತೆಗಳ ಪ್ರಭೇದಕ್ಕೂ ಸಂಬಂಧವಿಲ್ಲ. ಅಲ್ಲಿನ ಮಿಡತೆಗಳು ಬೆಳೆ ಹಾನಿ ಮಾಡುತ್ತವೆ. ಆದರೆ ಸ್ಥಳೀಯ ಮಿಡತೆಗಳಿಂದ ಬೆಳೆ ಹಾನಿಯಾಗುವುದಿಲ್ಲ ಎಂದು ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ.ಸುಧಾಕರ್ ಹಾಗೂ ಡಾ.ಷಹೀರ್ ಕಾರ್ತಿಕ್ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿ ಆತಂಕ ನಿವಾರಿಸಿದರು.

ಎಕ್ಕದ ಗಿಡದಲ್ಲಿ ಜಾಸ್ತಿ: ಸ್ಥಳೀಯ ಮಿಡತೆಗಳು ಸಾಮಾನ್ಯವಾಗಿ ಎಕ್ಕದ ಗಿಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲಿನ ರೀತಿಯಲ್ಲಿ ಆವರಿಸಿಕೊಳ್ಳುವುದಿಲ್ಲ. ಮಣ್ಣಿನಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿರುತ್ತವೆ. ಮಳೆ ಬಂದಾಗ ಈ ಮೊಟ್ಟೆಗಳಿಂದ ಹೊರಬಂದು ಭೂಮಿಯಿಂದ ಪುಟಿದೆದ್ದು ಹಾರಲು ಪ್ರಾರಂಭಿಸುತ್ತವೆ ಎಂದು ವಿವರಿಸಿದರು.

ಸ್ಥಳೀಯ ಮಿಡತೆಗಳನ್ನು ಸಾಯಿಸುವ ಅವಶ್ಯಕತೆ ಇಲ್ಲ. ಆದರೂ ಗ್ರಾಮಸ್ಥರ ಆತಂಕದಿಂದಾಗಿ ಎಕ್ಕದ ಗಿಡ ಹಾಗೂ ತರಕಾರಿ ಗಿಡಗಳಿಗೆ ಕೀಟನಾಶಕ ಸಂಪಡಣೆ ಮಾಡಲಾಗಿದೆ, ರೈತರು ಗಾಬರಿಯಾಗಬೇಕಿಲ್ಲ ಎಂದರು. ಮಿಡತೆಗಳು ಉತ್ತರ ಭಾರತದಿಂದ ಇಲ್ಲಿಗೆ ಹಾರಿ ಬರುವಷ್ಟು ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ತೋಟಗಳಲ್ಲಿ ಬೆಳೆ ನಾಶಕ ಮಿಡತೆ ಕಂಡುಬಂದರೆ ತಕ್ಷಣ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್.ಕೆ.ಶಿವಕುಮಾರ್, ಕೃಷಿ ವಿಜ್ಞಾನಿ ಕೇಂದ್ರದ ಮುಖ್ಯಸ್ಥ ಕೆ. ತುಳಸಿರಾಂ, ಬಂಗಾರಪೇಟೆ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾರೆಡ್ಡಿ ಹಾಜರಿದ್ದರು.

ರೈತರ ಸಂದೇಹಕ್ಕೆ ಉತ್ತರ: ದಿಂಬ ಗೇಟ್ ಬಳಿಯ ರಸ್ತೆ ಬದಿಯಲ್ಲಿ ಬೆಳೆದಿದ್ದ ಎರಡು ಎಕ್ಕದ ಗಿಡದ ಮೇಲೆ ನೂರಾರು ಮಿಡತೆಗಳು ಕಾಣಿಸಿಕೊಂಡು ಎಲೆಯನ್ನು ಸಂಪೂರ್ಣ ತಿಂದು ಹಾಕಿದ್ದವು. ಗಿಡದ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದ ಮೇಲೂ ಓಡಾಡುತ್ತಿದ್ದವು. ಈ ವಿಷಯ ಗ್ರಾಮದಲ್ಲಿ ಬಾಯಿಯಿಂದ ಬಾಯಿಗೆ ಹಬ್ಬಿ ರೈತರು ಆತಂಕಗೊಂಡಿದ್ದರು. ಮಿಡತೆಗಳನ್ನು ಸ್ಥಳೀಯರೇ ಸುಟ್ಟು ಹಾಕಿದ್ದರಾದರೂ ಮಿಡತೆಗಳು ಹೇಗೆ ಕಾಣಿಸಿಕೊಂಡವು ಎಂಬ ಸಂದೇಹಕ್ಕೆ ಉತ್ತರ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net