

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶ್ರೀಪತಿಹಳ್ಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಸಿಡಿಮದ್ದು ಸಿಡಿದು ಹೆಣ್ಣುಕರಡಿ ಬಾಯಿ ಛಿದ್ರಗೊಂಡಿದ್ದು ಗಂಭೀರವಾಗಿ ಗಾಯಗೊಂಡಿದೆ.
ಕಾಡು ಹಂದಿ ಹಾವಳಿ ನಿಯಂತ್ರಣಕ್ಕೆ ಜಮೀನಿನಲ್ಲಿ ಇಟ್ಟಿದ್ದ ಸಿಡಿಮದ್ದಿಗೆ ಕರಡಿ ಬಾಯಿ ಹಾಕಿದಾಗ ಅದು ಸ್ಟೋಟಗೊಂಡಿದೆ. ಸ್ಟೋಟದ ತೀವ್ರತೆಗೆ ಕರಡಿ ಬಾಯಿ ರಕ್ತಸಿಕ್ತವಾಗಿ ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸುಮಾರು 6 ವರ್ಷದ ಹೆಣ್ಣು ಕರಡಿ ರಾತ್ರಿ ವೇಳೆ ಆಹಾರ ಹುಡುಕುತ್ತಾ ಬಂದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದೃಶ್ಯ ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬನ್ನೇರುಘಟ್ಟಕ್ಕೆ ರವಾನೆ: ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಅರಣ್ಯಾಧಿಕಾರಿಗಳು ಗಾಯಗೊಂಡ ಕರಡಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರವಾನಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಕರಡಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಬೆಳೆ ರಕ್ಷಣೆಗೆ ಸಿಡಿಮದ್ದು: ವೀರಸಾಗರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಶ್ರೀಪತಿಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಕಾಡು ಹಂದಿಗಳು ಹೆಚ್ಚಿವೆ. ಈ ಭಾಗದಲ್ಲಿ ರಾಗಿ, ಜೋಳ ಸೇರಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ ಜತೆಗೆ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ನಡೆಯುತ್ತಿದ್ದು ಜಾನುವಾರುಗಳ ಮೇವಿಗಾಗಿ ಹೆಚ್ಚಿನ ರೈತರು ಮುಸುಕಿನ ಜೋಳ ಬೆಳೆಯುತ್ತಾರೆ. ಆದರೆ ರಾತ್ರಿ ವೇಳೆ ಕಾಡು ಹಂದಿಗಳು ದಾಳಿ ಮಾಡಿ ಜೋಳದ ಬೆಳೆಯನ್ನು ನಾಶಪಡಿಸುತ್ತವೆ ಎನ್ನಲಾಗಿದ್ದು, ಕಾಡು ಹಂದಿಗಳಿಂದ ಬೆಳೆ ರಕ್ಷಣೆ ಮಾಡಲು ರೈತರು ಸಿಡಿಮದ್ದು ಇಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಕಾಡುಹಂದಿಗಳು ಜಮೀನಿಗೆ ಬಂದ ವೇಳೆ ಸಿಡಿಮದ್ದಿನಿಂದ ಗಾಯಗೊಳ್ಳುತ್ತವೆ ಮತ್ತೆ ಇತ್ತ ಕಡೆ ಸುಳಿಯುವುದಿಲ್ಲ ಎಂಬುದು ರೈತರು ಕಂಡುಕೊಂಡಿರುವ ಪರಿಹಾರ ಮಾರ್ಗವಾಗಿದೆ. ಈ ಪ್ರಕರಣದಲ್ಲಿ ಕರಡಿ ಸಿಡಿಮದ್ದನ್ನು ಆಹಾರ ಎಂಬು ಬಾವಿಸಿ ಬಾಯಿ ಹಾಕಿದಾಗ ಸಿಡಿಮದ್ದು ಸಿಡಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಹಸು ಗಾಯಗೊಂಡಿತ್ತು: ಕಳೆದೆರಡು ವರ್ಷದ ಹಿಂದೆ ಹೊಸಕೋಟೆ ಹೊರವಲಯದಲ್ಲೂ ಇಂಥಹದ್ದೇ ಪ್ರಕರಣ ನಡೆದಿತ್ತು, ಸಿಡಿಮದ್ದಿಗೆ ಬಾಯಿ ಹಾಕಿದ ಹಸುವೊಂದ ಬಾಯಿ ಛಿದ್ರಗೊಂಡಿತ್ತು, ಕೆಲವು ದಿನಗಳ ಚಿಕಿತ್ಸೆ ನಡೆದರೂ ಚಿಕಿತ್ಸೆ ಲಕಾರಿಯಾಗದೆ ಹಸು ಅಸುನೀಗಿತ್ತು. ಇಂಥ ಪ್ರಕರಣಗಳು ಅರಣ್ಯದಂಚಿನ ಗ್ರಾಮಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ.
ಸೋಂಪುರ ಹೋಬಳಿಯಲ್ಲಿ ಕಾಡುಪ್ರಾಣಿಗಳು: ನೆಲಮಂಗಲ ತಾಲೂಕು ಸೋಂಪುರ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ, ಕರಡಿಗಳ ಸಂಖ್ಯೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಕಂಬಾಳುಗೊಲ್ಲರಹಟ್ಟಿಯಲ್ಲಿ ಚಿರತೆ ಮಹಿಳೆಯನ್ನು ಕೊಂದ ಪ್ರಕರಣ ಬಳಿಕ ಅರಣ್ಯ ಇಲಾಖೆ ಅಲರ್ಟ್ ಅಗಿದ್ದು, ಬೋನುಗಳನ್ನಿಟ್ಟು ಚಿರತೆಗಳ ಸೆರೆಗೆ ಕಾರ್ಯಾಚರಣೆ ರೂಪಿಸಿದೆ. ಈಗಾಗಲೇ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ತೋಟದ ಮನೆಗಳ ಬಳಿ ಅರಣ್ಯದಂಚಿನ ಜಮೀನುಗಳಲ್ಲಿ ಕಾಡುಮೃಗಗಳ ಸಂಚಾರ ಹೆಚ್ಚಾಗಿದ್ದು ಗ್ರಾಮಸ್ಥರು ಆತಂಕದಲ್ಲೆ ದಿನದೂಡುವಂತಾಗಿದೆ.