ಸ್ಥಳೀಯ ಸಂಸ್ಥೆ ವಶಕ್ಕೆ ಕೈ ಪಡೆ ಸಿದ್ಧ

Local body ready to seize power
Local body ready to seize power
Published on

ರಬಕವಿ/ಬನಹಟ್ಟಿ: ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಬೇರುಮಟ್ಟದಲ್ಲಿ ವಿನೂತನ ಪಡೆ ರಚಿಸುವ ಮೂಲಕ ಬರುವ ಜಿಪಂ, ತಾಪಂ ಹಾಗೂ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.

ಬನಹಟ್ಟಿಯ ಐಬಿಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸುಭದ್ರ ಸಂಘಟನೆಗಾಗಿ ನಗರ, ಕ್ಷೇತ್ರ, ಬ್ಲಾಕ್ ಕಮಿಟಿಯಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಪಕ್ಷದ ಅಧಿಕಾರ ವಿಸ್ತರಣೆ ನಡೆಯಲಿದೆ. ನಗರ ಸೇರಿ ಗ್ರಾಮೀಣ ಪ್ರದೇಶದ ಬೂತ್‌ಮಟ್ಟದಲ್ಲಿ 15ರಿಂದ 20 ಸದಸ್ಯರೊಂದಿಗೆ ಸಮಿತಿ ರಚನೆ ಮಾಡುವ ಮೂಲಕ ಸಂಘಟನೆಯ ಶಕ್ತಿ ಹಾಗೂ ಒತ್ತು ನೀಡಲಾಗುವುದು ಎಂದರು.

ಬೆಲೆ ಏರಿಕೆ ಅನಿವಾರ್ಯ. ಬಡವರ ಗ್ಯಾರಂಟಿ ಯೋಜನೆಗೆ ವಾರ್ಷಿಕ 60 ಸಾವಿರ ಕೋಟಿ ರೂ.ಬೇಕು. ಅನುಕೂಲವಾದವರಿಂದ ಅನಾನುಕೂಲವಾದವರಿಗೆ ನೀಡುವುದೇ ರಾಜನೀತಿ. ಕೆಲ ದೈನಂದಿನ ವಸ್ತುಗಳ ಬೆಲೆ ಏರಿಕೆ ನನಗೂ ಬೇಸರ ತಂದಿದೆ. ಮುಖ್ಯಮಂತ್ರಿಗಳಿಗೆ ಮನವಿಯೊಂದಿಗೆ ಹಾಲು, ಮೊಸರಿನ ದರ 4 ರೂ. ಬದಲು 2 ರೂ. ಏರಿಸಲು ಮನವಿ ಮಾಡಲಾಗುವದೆಂದು ನಂಜಯ್ಯನಮಠ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಮುಖಂಡ ಸಿದ್ದು ಕೊಣ್ಣೂರ, ರಾಜೇಂದ್ರ ಭದ್ರನ್ನವರ, ಎ.ಆರ್. ಬೆಳಗಲಿ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ವೆಂಕನಗೌಡ ಪಾಟೀಲ, ಪ್ರವೀಣ ನಾಡಗೌಡ, ಭೀಮಶಿ ಮಗದುಮ್, ನೀಲಕಂಠ ಮುತ್ತೂರ, ನೀಲೇಶ ಮುತ್ತೂರ, ಸಾಧಿಕ ಬೇಪಾರಿ, ಹರ್ಷವರ್ಧನ ಪಟವರ್ಧನ, ಸಂಜಯ ಜೋತಾವರ, ಸಂಗಮೇಶ ಮಡಿವಾಳ, ಭೀಮಶಿ ಪಾಟೀಲ, ಶಂಕರ ಕೆಸರಗೊಪ್ಪ, ರವಿ ಬಾಡಗಿ ಇದ್ದರು.

ಸತ್ತ ಮೇಲೆ ಅವಶ್ಯಕತೆಯಿಲ್ಲ:  ರಾಜ್ಯದಲ್ಲಿ ಬೇರೆ ಪಕ್ಷದಲ್ಲಿ ಹಾಳುಗೆಟ್ಟವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳಬೇಡಿ ಎಂದು ಈಗಾಗಲೇ ಹೈಕಮಾಂಡ್‌ಗೆ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮನವಿ ಮಾಡಲಾಗಿದೆ ಎನ್ನುವ ಮೂಲಕ ಸತ್ತರೂ ಕಾಂಗ್ರೆಸ್ ಸೇರಲ್ಲ ಎಂದಿರುವ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂಜಯ್ಯನಮಠ ಅವರು, ಸತ್ತ ಮೇಲೆ ಕಾಂಗ್ರೆಸ್‌ಗೆ ಅವಶ್ಯಕತೆಯಿಲ್ಲವೆಂದು ಟಾಂಗ್ ಕೊಟ್ಟರು.

ಯತ್ನಾಳ ಗೌಡರಿಗೆ ಸಲಹೆ: ಮಾಜಿ ಮುಖ್ಯಮಂತ್ರಿ ರಾಜ್ಯದಲ್ಲಿ ಬಿಜೆಪಿಯನ್ನು ತಳಹಂತದಿಂದ ಕಟ್ಟಿದವರು. ಅವರಿಗೆ ಗೌರವ ನೀಡಬೇಕಿತ್ತು. ಬದಲಾಗಿ ಸಂಸ್ಕೃತಿ ಬಿಟ್ಟು ನಡೆದುಕೊಂಡಿದ್ದರಿಂದ ಹೀಗಾಗಿದೆ. ಬಿಎಸ್‌ವೈಗೆ ಗೌರವ ನೀಡಿ, ವಿಜಯೇಂದ್ರರಿಗೆ ಬಗ್ಗಬೇಡಿ ಎಂದು ಎಸ್.ಜಿ. ನಂಜಯ್ಯನಮಠ ಅವರು ಯತ್ನಾಳರಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net