ನಗರಸ್ಥಳೀಯ ಸಂಸ್ಥೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನ. 2ಕ್ಕೆ; 117 ಪುರಸಭೆ, 100 ಪ.ಪಂ.ಗೆ ನ. 10ಕ್ಕೆ ಚುನಾವಣೆ

election
Published on

ಬೆಂಗಳೂರು: ನಗರಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಮಹೂರ್ತ ನಿಗದಿಯಾಗಿದೆ. 276 ನಗರ ಸ್ಥಳೀಯ ಸಂಸ್ಥೆಗಳು ಕೊನೆಗೂ ಚುನಾಯಿತ ಪ್ರತಿನಿಧಿಗಳ ಅಧಿಕಾರಕ್ಕೆ ಒಳಪಡುವ ಕಾಲ ಸನ್ನಿಹಿತವಾಗಿದೆ. ನವೆಂಬರ್ 2 ರ ಒಳಗೆ 59 ನಗರಸಭೆ, ನವೆಂಬರ್ 10ರ ಒಳಗೆ 117 ಪುರಸಭೆ, 100 ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

2018 ಆಗಸ್ಟ್ ತಿಂಗಳಿನಲ್ಲಿ 276 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿವಾದದಿಂದ ಚುನಾವಣೆ ನಡೆದಿರಲಿಲ್ಲ. ಮೀಸಲಾತಿ ವಿಚಾರವಾಗಿ ಅನೇಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ತಡೆಯಾಜ್ಞೆಯಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗದೆ ಎರಡು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಅಧಿಕಾರವಿರಲಿಲ್ಲ.
ಈ ವಿಷಯ ವಿಧಾನಮಂಡಲದಲ್ಲಿ ಗಂಭೀರ ಚರ್ಚೆ ನಡೆದಿತ್ತು, ವಿಧಾನ ಪರಿಷತ್ ಸದಸ್ಯರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಪರಿಷ್ಕೃತ ಮೀಸಲಾತಿ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಅ.8ರಂದು ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲೂ ಲೋಪಗಳಿವೆ ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೊಮ್ಮೆ ತಡೆಯಾಜ್ಞೆ ನೀಡಿತ್ತು. ಆದರೆ, ಅ.18 ರಂದು 59 ನಗರಸಭೆಗಳ ಮೀಸಲಾತಿ ಪಟ್ಟಿಗೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವ ನಗರಾಭಿವೃದ್ಧಿ ಇಲಾಖೆ ನವೆಂಬರ್2ರೊಳಗೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.

ಉಳಿದ 117 ಪುರಸಭೆ, 100 ಪಟ್ಟಣ ಪಂಚಾಯತಿಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಅ.19ರಂದು ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗಳಿಗೆ ನವೆಂಬರ್ 10ರ ಒಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net