ಸೆ.3ರಂದು ಸ್ಥಳೀಯ ಅದಾಲತ್ : ಪಿ.ಬೇಬಿ ಬಾಲಕೃಷ್ಣನ್ ಮಾಹಿತಿ :ದೂರು, ಅರ್ಜಿ ಸಲ್ಲಿಕೆಗೆ ಅವಕಾಶ

aadalth8
Published on

ಕಾಸರಗೋಡು: ಸರ್ಕಾರದ ಮೂರನೇ ವರ್ಷಾಚರಣೆ ಅಂಗವಾಗಿ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಸ್ಥಳೀಯ ಅದಾಲತ್ ಸೆಪ್ಟೆಂಬರ್ 3ರಂದು ಕಾಸರಗೋಡು ನಗರ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅದಾಲತ್‌ನಲ್ಲಿ ಸ್ಥಳೀಯಾಡಳಿತ ಇಲಾಖೆಗೆ ಸಂಬಂಧಿಸಿದ 12 ವಿಭಾಗಗಳನ್ನೊಳಗೊಂಡ ದೂರು, ಅರ್ಜಿಗಳನ್ನು ಪರಿಗಣಿಸಲಾಗುವುದು. ಸಾರ್ವಜನಿಕರು adalat.lsgkerala.gov.in ವೆಬ್‌ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು. 127 ದೂರು ಲಭಿಸಿದ್ದು, ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಲೇವಾರಿಗೆ ಬಾಕಿ ಇರುವ ದೂರುಗಳನ್ನೂ ಅದಾಲತ್‌ನಲ್ಲಿ ಪರಿಗಣಿಸಲಾಗುವುದು. ಆ.29ರವರೆಗೆ ವೆಬ್‌ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು. ಉಪಜಿಲ್ಲಾ ಅದಾಲತ್ ಸಮಿತಿಗಳು ವಿವಿಧ ಸ್ಥಳೀಯ ಸಂಸ್ಥೆಗಳ ದೂರು ಪರಿಶೀಲಿಸಿ ಅದಾಲತ್‌ಗೆ ವರದಿ ಸಲ್ಲಿಸುತ್ತವೆ. ಸೆ.3ರಂದು ಬೆಳಗ್ಗೆ 8.30ರಿಂದ ನೋಂದಣಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿದ್ದು, ಅದಾಲತ್‌ನಲ್ಲಿ ಹೊಸ ದೂರುಗಳನ್ನು ಸಹ ಪರಿಗಣಿಸಲಾಗುವುದು. ಆನ್‌ಲೈನ್‌ನಲ್ಲಿ ವೆಬ್ ಪೋರ್ಟಲ್‌ಗಳಲ್ಲಿ ದಾಖಲಾಗುವ ದೂರುಗಳ ಸ್ಥಿತಿ ಪರಿಶೀಲಿಸುವ ಸೌಲಭ್ಯ ದೂರುದಾರರಿಗೆ ಒದಗಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಸ್ಥಳೀಯಾಡಳಿತ ಇಲಾಖೆ ಉಪನಿರ್ದೇಶಕ ಕೆ.ವಿ.ಹರಿದಾಸ್, ಸಹಾಯಕ ನಿರ್ದೇಶಕ ಬಿ.ಎನ್.ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net