ಶಿಗ್ಗಾಂವಿ ಟಿಕೆಟ್‌ಗೆ ಕಾಂಗ್ರೆಸ್-ಬಿಜೆಪಿಗರ ಲಾಬಿ ಶುರು

Congress BJP
Published on

ಶಿಗ್ಗಾಂವಿ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಇನ್ನೂ ಉಪ ಚುನಾವಣೆ ಘೋಷಣೆಯಾಗಿಲ್ಲ. ಆಗಲೇ, ಬಿಜೆಪಿ ಮತ್ತು ಕಾಂಗ್ರೆಸ್‌ನ ಆಕಾಂಕ್ಷಿಗಳು ತಾಲೀಮು ಆರಂಭಿಸಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ನಾಯಕರ ಮೇಲೆ ಒತ್ತಡದ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಬೊಮ್ಮಾಯಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ ದುಂಡಿಗೌಡ್ರ, ಲೋಕಸಭಾ ಚುನಾವಣೆ ಪೂರ್ವದಲ್ಲಿ ಬಿಜೆಪಿ ಸೇರಿರುವ ಶಶಿಧರ ಯಲಿಗಾರ ಟಿಕೆಟ್ ಆಕಾಂಕ್ಷಿಗಳು. ಪುತ್ರ ಭರತಗೆ ಟಿಕೆಟ್ ಕೊಡಿಸಲು ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ, ಗೆಲ್ಲಿಸಿಕೊಂಡು ಬರುವುದಾಗಿಯೂ ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಯಾರ ಪರ ಇದೆಯೋ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ. ನಮ್ಮಲ್ಲೂ ಅನೇಕ ಸಮರ್ಥರಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಹೇಳಿದ್ದರು. 2008ರಿಂದ ನಂತರ ಶಿಗ್ಗಾಂವಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಪಕ್ಷ ಬೊಮ್ಮಾಯಿ ಪುತ್ರನಿಗೆ ಮಣೆ ಹಾಕುತ್ತದೆಯೋ, ಬೇರೊಬ್ಬರಿಗೆ ಅವಕಾಶ ನೀಡುತ್ತದೆಯೋ ಎನ್ನುವ ಬಗ್ಗೆ ಕುತೂಹಲವಿದೆ.

ಕಾಂಗ್ರೆಸ್‌ನಲ್ಲೂ ಭಾರಿ ಪೈಪೋಟಿ: ಉಪಚುನಾವಣೆ ಟಿಕೆಟ್‌ಗೆ ಕಾಂಗ್ರೆಸ್‌ನಲ್ಲೂ ತೀವ್ರ ಪೈಪೋಟಿ ಶುರುವಾಗಿದೆ. ಬೊಮ್ಮಾಯಿ ವಿರುದ್ಧ 3 ಬಾರಿ ಸೋತಿರುವ ಸೈಯ್ಯದ್ ಅಜೀಮ್‌ಪೀರ್ ಖಾದ್ರಿ ಅವರು ಜನಬೆಂಬಲ, ಅನುಕಂಪ ಆಧರಿಸಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ 2018ರಲ್ಲಿ ಬೊಮ್ಮಾಯಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ನಂತರ ಕಾಂಗ್ರೆಸ್ ಸೇರಿ, ಸದ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಅವರು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಮಾಜಿ ಸಂಸದ ಮಂಜುನಾಥ ಕುನ್ನೂರ ಪುತ್ರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ ಟಿಕೆಟ್ ಕೇಳಿದ್ದಾರೆ. ಸ್ಥಳೀಯರಿಗೆ ಅವಕಾಶ ಕೊಡಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ತಮ್ಮ ತಂದೆಯ ಪ್ರಭಾವ ಬಳಸಿ ಲಾಬಿ ನಡೆಸುತ್ತಿದ್ದಾರೆ. ಅಲ್ಲದೆ, ಕಳೆದ ಬಾರಿ ಸೋತಿರುವ ಯಾಸೀರ್ ಅಹಮದ್‌ಖಾನ್ ಪಠಾಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿ ಹಲವರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ವಿನಯ ಕುಲಕರ್ಣಿ ಪತ್ನಿ ಹೆಸರು ಚಾಲ್ತಿಗೆ: ಕಾಂಗ್ರೆಸ್ ಟಿಕೆಟ್‌ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಧಾರವಾಡ (ಗ್ರಾಮೀಣ) ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಸಹ ಕೇಳಿಬರುತ್ತಿದೆ. 2023ರ ಚುನಾವಣೆಯಲ್ಲೂ ಕ್ಷೇತ್ರಕ್ಕೆ ವಿನಯ ಕುಲಕರ್ಣಿ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ, ಕುರುಬ ಮತಗಳೇ ನಿರ್ಣಾಯಕ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಸಮಾಜದ ಮತ ಹೆಚ್ಚಿವೆ. ಮುಸ್ಲಿಂ, ಕುರುಬ ಸಮಾಜ ಕಾಂಗ್ರೆಸ್ ಪರ ಒಲವು ಹೊಂದಿವೆ. ಪ್ರಬಲ ಪಂಚಮಸಾಲಿ ಸಮುದಾಯದ ಶಿವಲೀಲಾ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿದರೆ, ಲಿಂಗಾಯತರ ಜತೆಗೆ ಇತರ ಸಮುದಾಯದ ಮತ ಸೆಳೆಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆಯಾದರೂ, ಅದು ವ್ಯಾವಹಾರಿಕವಾಗಿ ಸಾಧ್ಯವಾಗುವುದು ಸುಲಭವಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಹೊರಗಿನವರಿಗೆ ಆಕ್ಷೇಪ: ಕಾಂಗ್ರೆಸ್ ಹಿಂದಿನಿಂದಲೂ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತ ಬಂದಿದೆ. ಇದೇ ಕಾರಣದಿಂದ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಲು ಅನುಕೂಲವಾಗಿದೆ ಎಂಬ ಮಾತಿದೆ. ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡಿ, ಮುಸ್ಲಿಂ ಸಮುದಾಯಕ್ಕೆ ಪಕ್ಷ ಅಥವಾ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಿ ಸಮಾಧಾನ ಮಾಡುವ ಕುರಿತು ವರಿಷ್ಠರು ಯೋಚಿಸುತ್ತಿರುವುದಾಗಿ ತಿಳಿದುಬಂದಿದೆ. ಶಿವಲೀಲಾ ಕುಲಕರ್ಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೊರಗಿನವರು ಎಂಬ ಅಸಮಾಧಾನದ ಮಾತು ಸಹ ಪಕ್ಷದ ಆಂತರಿಕ ವಲಯದಲ್ಲಿ ಸಣ್ಣದಾಗಿ ಕೇಳಿಬರುತ್ತಿದೆ.
ಲಿಂಗಾಯತರಿಗೆ ಟಿಕೆಟ್ ನೀಡುವುದಾರೆ ಸ್ಥಳೀಯರಿಗೆ ಕೊಡಬೇಕು ಎಂಬ ಬೇಡಿಕೆಯೂ ಪ್ರಮುಖ ನಾಯಕರಿಂದ ಕೇಳಿಬರುತ್ತಿದೆ. ಉಪಚುನಾವಣೆ ಘೋಷಣೆಯಾಗುವವರೆಗೆ ಇನ್ನೂ ಏನೇನು ಬೆಳವಣಿಗೆಯಾಗುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಸಮುದಾಯವಾರು ಮತ: ಶಿಗ್ಗಾಂವಿಯ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿಗಳ ಪ್ರಭಾವ ಹೆಚ್ಚಿದೆ. ಸವಣೂರ ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಹೊರತುಪಡಿಸಿ, ಇತರ ಸಮುದಾಯದವರ ಪ್ರಭಾವ ಕಡಿಮೆ. ಒಟ್ಟು 2,30,063 ಮತದಾರರಿರುವ ಕ್ಷೇತ್ರದಲ್ಲಿ ಅಂದಾಜು 66 ಸಾವಿರ ಲಿಂಗಾಯತ, 60 ಸಾವಿರ ಮುಸ್ಲಿಂ, 30 ಸಾವಿರ ಕುರುಬ, 25 ಸಾವಿರ ಎಸ್‌ಸಿ, ಎಸ್‌ಟಿ, ಉಳಿದಂತೆ ಲಂಬಾಣಿ ಜನಾಂಗ ಸೇರಿದಂತೆ ಸಣ್ಣಪುಟ್ಟ ಸಮುದಾಯದ ಮತದಾರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net