

ಅವಿನಾಶ್ ಜೈನಹಳ್ಳಿ ಮೈಸೂರು
ಮೇಲ್ವರ್ಗದವರೇ ಹೆಚ್ಚಾಗಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಆರು ತಿಂಗಳಿಗೂ ಮುನ್ನವೇ ಚುನಾವಣಾ ಕಣ ರಂಗೇರುತ್ತಿದ್ದು, ವಿವಿಧ ಪಕ್ಷದ ಆಕಾಂಕ್ಷಿಗಳು ಟಿಕೆಟ್‌ಗಾಗಿ ನಾನಾ ತಂತ್ರ ರೂಪಿಸುತ್ತಿದ್ದಾರೆ. ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ. ಜೆಡಿಎಸ್‌ನಿಂದಲೂ ಕೆಲವರು ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳ ಪೈಕಿ ಕೃಷ್ಣರಾಜ ಕ್ಷೇತ್ರವೂ ಒಂದಾಗಿದ್ದು, ಬ್ರಾಹ್ಮಣರ ನಂತರ ವೀರಶೈವ ಲಿಂಗಾಯತ ಮತದಾರರು ಹೆಚ್ಚಾಗಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ದಲಿತ, ಕುರುಬ, ಒಕ್ಕಲಿಗ ಸಮುದಾಯದ ಮತದಾರರ ಸಂಖ್ಯೆ ಕಂಡುಬರುತ್ತದೆ. ಹಾಗಾಗಿ, ಮೂರೂ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪೈಕಿ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದವರೇ ಹೆಚ್ಚಾಗಿರುವುದು ವಿಶೇಷ.
ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳು!
ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕರಿದ್ದರೂ 2023ರ ಚುನಾವಣೆಗೆ ಆ ಪಕ್ಷದಿಂದ ಟಿಕೆಟ್ ಪಡೆಯಲು ಅನೇಕರು ಪ್ರಯತ್ನ ನಡೆಸುತ್ತಿದ್ದಾರೆ. ಶಾಸಕ ಎಸ್.ಎ. ರಾಮದಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ಮಾಜಿ ಅಧ್ಯಕ್ಷ ಎನ್.ವಿ. ಫಣೀಶ್, ಪಾಲಿಕೆ ಸದಸ್ಯರಾದ ಎಂ.ಪಿ. ರಮೇಶ್, ಮಾ.ವಿ. ರಾಮಪ್ರಸಾದ್ ಆಕಾಂಕ್ಷಿಗಳಾಗಿದ್ದಾರೆ. ಈ ಎಲ್ಲರೂ ಬ್ರಾಹ್ಮಣ ಸಮುದಾಯದವರೇ ಆಗಿರುವುದು ವಿಶೇಷ.
ಈ ಪೈಕಿ ಶಾಸಕ ಎಸ್.ಎ. ರಾಮದಾಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರದ ನಾನಾ ಭಾಗಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಾಯಕರ ಗಮನ ಸೆಳೆಯಲು ಮುಂದಾಗಿದ್ದಾರೆ. ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ‘ಮೋದಿ ಯುಗ ಉತ್ಸವ್’ ಕಾರ್ಯಕ್ರಮ ಆಯೋಜಿಸಿ ಮುನ್ನೆಲೆಯಲ್ಲಿದ್ದಾರೆ. ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆಯೇ ರಾಮದಾಸ್ ಅವರನ್ನು ಕರೆದು ಆತ್ಮೀಯವಾಗಿ ಮಾತನಾಡಿಸಿದ್ದು ಪಕ್ಷದಲ್ಲಿ ರಾಮದಾಸ್ ಅವರ ವರ್ಚಸ್ಸು ಹೆಚ್ಚಿಸಿದೆ.
ಇದಲ್ಲದೆ, ಶಾಸಕರು ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಶಾಸಕರು, ಪಕ್ಷವನ್ನು ಪ್ರಬಲವಾಗಿ ಸಂಘಟಿಸುತ್ತಿದ್ದಾರೆ. ಜತೆಗೆ, ತಮ್ಮ ಆಸರೆ ಫೌಂಡೇಷನ್ ಮೂಲಕವೂ ಅನೇಕ ಕೆಲಸ ಮಾಡುತ್ತಿದ್ದಾರೆ. 1994, 1999, 2004, 2008, 2013 ಹಾಗೂ 2018ರ ಚುನಾವಣೆಗಳಲ್ಲಿ ಒಟ್ಟು 6 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 4 ಬಾರಿ ಗೆದ್ದಿದ್ದಾರೆ. ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಎಚ್.ವಿ. ರಾಜೀವ್ ಹಾಗೂ ಶ್ರೀವತ್ಸ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎಚ್.ವಿ. ರಾಜೀವ್ 8 ವರ್ಷದಿಂದಲೂ ಸ್ವಚ್ಛ ಭಾರತ ಆಂದೋಲನ ನಡೆಸುವ ಮೂಲಕ ರಾಷ್ಟ್ರ ಮಟ್ಟದ ನಾಯಕರ ಬಳಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ರಾಜೀವ್ 15,573 ಮತ ಗಳಿಸಿದ್ದರು. ಆಗ ಮತ ವಿಭಜನೆಯ ಲಾಭ ಪಡೆದಿದ್ದ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್ 52,611 ಮತ ಪಡೆದು ಜಯ ಗಳಿಸಿದ್ದರು. ಎಸ್.ಎ.ರಾಮದಾಸ್ 46,546 ಮತ ಪಡೆದು ಸೋಲು ಅನುಭವಿಸಿದ್ದರು.
ಶ್ರೀವತ್ಸ ಕೂಡ ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2023ರ ಚುನಾವಣೆಗೆ ಶ್ರೀವತ್ಸ ಅವರಿಗೆ ಟಿಕೆಟ್ ನೀಡುವಂತೆ ಸಂಘ ಪರಿವಾರದ ನಾಯಕರು ಒತ್ತಾಯ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ಎನ್.ವಿ.ಫಣೀಶ್, ಎಂ.ಪಿ.ರಮೇಶ್ ಮತ್ತು ರಾಮಪ್ರಸಾದ್ ತಮ್ಮದೇ ಮೂಲಗಳಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಪೈಕಿ ರಾಮದಾಸ್ ಹಾಗೂ ಶ್ರೀವತ್ಸ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್‌ನಲ್ಲೂ ಇದ್ದಾರೆ ಆಕಾಂಕ್ಷಿಗಳು!
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಯುವ ಮುಖಂಡ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್, ಮುಖಂಡ ಎನ್.ಎಂ.ನವೀನ್‌ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅರ್ಜಿ ಸಲ್ಲಿಸಿದ್ದಾರೆ.
ಎಂ.ಕೆ.ಸೋಮಶೇಖರ್ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತೆಯೆ, ಕ್ಷೇತ್ರದಲ್ಲಿ ಉದ್ಯೋಗ ಮೇಳ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪಕ್ಷ ಕಟ್ಟುವ ಕೆಲಸವನ್ನೂ ಮಾಡುತ್ತಿದ್ದಾರೆ. ಕುರುಬ ಸಮುದಾಯದ ನಾಯಕರಾಗಿರುವ ಇವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಕ್ಷೇತ್ರದಲ್ಲಿ 5 ಬಾರಿ ಚುನಾವಣೆಗೆ ಸ್ಪರ್ಧಿಸಿ 2 ಬಾರಿ ಶಾಸಕರಾಗಿದ್ದಾರೆ.
1999 ಮತ್ತು 2004ರ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ, 2008, 2013, 2018ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡೂ ಪಕ್ಷಗಳಿಂದ ಒಮ್ಮೊಮ್ಮೆ ಗೆಲುವು ಕಂಡಿದ್ದಾರೆ. ವಿಶೇಷವೆಂದರೆ, ಐದು ಬಾರಿಯೂ ಎಸ್.ಎ.ರಾಮದಾಸ್ ವಿರುದ್ಧವೇ ಮುಖಾಮುಖಿಯಾಗಿದ್ದಾರೆ. 2023ರ ಚುನಾವಣೆಗೆ ಮತ್ತೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.
ಯುವ ಮುಖಂಡ ಎಂ.ಪ್ರದೀಪ್‌ಕುಮಾರ್ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಅನೇಕ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಕೆ.ಆರ್.ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಎಲ್ಲ ರೀತಿಯ ತಯಾರಿ ನಡೆಸುತ್ತಿದ್ದಾರೆ. ಅನೇಕ ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಇವರು, ಆ ಪಕ್ಷದಿಂದ ನಗರ ಪಾಲಿಕೆ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ‘ಅತ್ಯುತ್ತಮ ನಗರ ಪಾಲಿಕೆ ಸದಸ್ಯ’ ಎಂಬ ಗೌರವ ಪಡೆದಿದ್ದಾರೆ. ಪ್ರಸ್ತುತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಧರಿಸಿದ್ದಾರೆ. ಪ್ರದೀಪ್‌ಕುಮಾರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ, ಇಡೀ ವೀರಶೈವ ಸಮುದಾಯ ಅವರ ಪರ ನಿಲ್ಲುತ್ತದೆ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿ ನಡೆಯುತ್ತಿದೆ. ದಾರಿದೀಪ ಸಮಾಜ ಸೇವಾ ಟ್ರಸ್ಟ್‌ನಿಂದ ಸಮಾಜ ಸೇವೆ ಮಾಡುತ್ತಿರುವ ಅವರು ಕಾಂಗ್ರೆಸ್‌ನ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.
ಎನ್.ಎಂ.ನವೀನ್‌ಕುಮಾರ್ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯದವರಾದ ಇವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್‌ಕುಮಾರ್ ಅವರ ಪುತ್ರ. ಕಳೆದ ಎರಡು ವರ್ಷಗಳಿಂದಲೂ ಕ್ಷೇತ್ರದಲ್ಲಿ ಜೋರಾಗಿ ಓಡಾಟ ನಡೆಸುತ್ತ ಪಕ್ಷ ಕಟ್ಟುತ್ತಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಕಾಂಗ್ರೆಸ್ ಸದಸ್ಯರನ್ನಾಗಿ ನೋಂದಾಯಿಸಿದ್ದಾರೆ. ಇನ್ನು ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್ ಕೂಡ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಜೆಡಿಎಸ್‌ನಿಂದ ನಗರಪಾಲಿಕೆ ಮಾಜಿ ಸದಸ್ಯ, ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಕೆ.ವಿ.ಮಲ್ಲೇಶ್ ಮತ್ತೆ ಟಿಕೆಟ್ ಬಯಸುತ್ತಿದ್ದಾರೆ. ಇವರು 2018ರ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಕಳೆದ ಬಾರಿ ನಿರಾಸೆಯಾಗಿದ್ದ ಮಾಜಿ ಉಪಮೇಯರ್, ದಲಿತ ಸಮುದಾಯದ ಮುಖಂಡ ವಿ.ಶೈಲೇಂದ್ರ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಸಂತೋಷ್ ಅಮ್ಮ ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಂತಿಮ ಘಳಿಗೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಟಿಕೆಟ್ ಸಿಗದ ಪ್ರಮುಖರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆದಿದೆ.