ಬೀದಿಬದಿ ವ್ಯಾಪಾರಿಗಳಿಗೆ ಸ್ಯೂರಿಟಿ ಇಲ್ಲದೆ ಸಾಲ

28srl2
ಶಿರಾಳಕೊಪ್ಪ ಪುರಸಭೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುರೇಶ್ ಮಾತನಾಡಿದರು. ಕಾಶಿನಾಥ್, ಟಿ.ರಾಜು, ಹೇಮಂತ ಡೊಳ್ಳೆ ಇತರರಿದ್ದರು.
Published on

ಶಿರಾಳಕೊಪ್ಪ: ಪಿಎಂ ಸ್ವನಿಧಿ ಸೇ ಸಮೃದ್ಧಿ ಯೋಜನೆಯು ಬೀದಿಬದಿ ವ್ಯಾಪಾರಿಗಳ ಇಡೀ ಕುಟುಂಬವೇ ಸಮೃದ್ಧಿ ಹೊಂದಬೇಕು ಎಂಬ ಮಹತ್ವದ ಆಶಯ ಹೊಂದಿದೆ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.

ಪುರಸಭೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆ ಪಡೆಯದೇ ಪ್ರಾರಂಭದಲ್ಲಿ 10 ಸಾವಿರ ರೂ. ಸಾಲ ನೀಡಲಾಗುವುದು. ಅದನ್ನು 1 ವರ್ಷದಲ್ಲಿ ತೀರಿಸಿದರೆ 20 ಸಾವಿರ ರೂ., ನಂತರ 50 ಸಾವಿರದಿಂದ 1 ಲಕ್ಷ ರೂ.ವರೆಗೂ ಯಾವುದೇ ಭದ್ರತೆ ಪಡೆಯದೆ ಸಾಲ ಕೊಡುವ ವ್ಯವಸ್ಥೆ ಈ ಯೋಜನೆಯಲ್ಲಿದೆ ಎಂದರು.
ವಿವಿಧ ಜೀವ ವಿಮಾ ಯೋಜನೆಗಳಿವೆ. ರೇಷನ್ ಕಾರ್ಡ್ ಇರುವವರು ದೇಶದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ರೇಷನ್ ಪಡೆಯುವ ವ್ಯವಸ್ಥೆ ಇದೆ. ಗರ್ಭಿಣಿ ಮಹಿಳೆಯರಿಗೆ 5 ಸಾವಿರ ರೂ. ದೊರೆಯಲಿದೆ. ಹೀಗೆ ಶ್ರೀ ಸಾಮಾನ್ಯರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಕಾಶಿನಾಥ್ ಮಾತನಾಡಿ, ವೈಯುಕ್ತಿಕವಾಗಿ ಬ್ಯಾಂಕ್‌ನಲ್ಲಿ ಶೇ.13 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಅದಕ್ಕೆ ಶೇ.7ಸಂಬ್ಸಿಡಿ ದೊರಕುತ್ತದೆ. ಇದನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡಿ ಮುಂದೆ ಬನ್ನಿ . ಮನೆ ಕಟ್ಟಿ,ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಎಂದರು.
ಪುರಸಭೆ ಸದಸ್ಯ ಟಿ.ರಾಜು ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗಿದೆ. ಕೆಲವರು ಅಂಗಡಿಗಳನ್ನು ಪಡೆದಿದ್ದು ಬೇರೆಡೆ ವ್ಯಾಪಾರ ಮಾಡುತ್ತಿದ್ದಾರೆ. ಬೇರೆ ಜಾಗದಲ್ಲಿ ವ್ಯಾಪಾರ ಮಾಡಿದರೂ ಬಾಡಿಗೆ ಕಟ್ಟಲೇ ಬೇಕಾಗುತ್ತದೆ. ಆಯಾ ತಿಂಗಳಿನ ಬಾಡಿಗೆ ಆಯಾ ತಿಂಗಳೇ ಪಾವತಿಸಿದರೆ ಒಳ್ಳೆಯದು. ಇಲ್ಲವಾದರೆ ಮುಂದೆ ಸಾಕಷ್ಟು ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಹೇಮಂತ ಡೊಳ್ಳೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net