

ಬಣಕಲ್: ತಾರತಮ್ಯವಿಲ್ಲದೆ ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ಹಾಗೂ ಹೊಸ ಸಾಲ ನೀಡಲು ತೀರ್ವನಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.
ಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪಿಸಿಎಆರ್ಡಿ ಬ್ಯಾಂಕ್, ಟಿಎಪಿಸಿಎಂಎಸ್ ಮತ್ತು ಇತರೆ ಸಹಕಾರ ಸಂಘದಿಂದ ಡಿಸಿಸಿ ಬ್ಯಾಂಕ್ ಅಧ್ಯಕರು, ಉಪಾಧ್ಯಕ್ಷರು, ನಿರ್ದೇಶಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್ ಮಾತನಾಡಿ, ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ. ಸಹಕಾರ ಸಂಘವನ್ನು ಮತ್ತಷ್ಟು ರೈತಸ್ನೇಹಿ ಹಾಗೂ ಜನಸ್ನೇಹಿಯಾಗಿಸಲು ಒಟ್ಟಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.
ಸಿಡಿಸಿಸಿ ಬ್ಯಾಂಕ್ ನಿರ್ದೆಶಕ ಹಳಸೆ ಶಿವಣ್ಣ ಮಾತನಾಡಿ, ಅತಿವೃಷ್ಟಿಯಿಂದ ಮಲೆನಾಡು ಭಾಗದಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಹಿಂದೆ ಒಂದೆರಡು ಕಾಡಾನೆಗಳು ಅಲ್ಪ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿದ್ದವು. ಈಗ ಕಾಡಾನೆ ಹಿಂಡು ಮನೆಯ ಸಮೀಪ ಬಂದು ಬೀಡು ಬಿಟ್ಟು ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿವೆ. ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷರೊಡನೆ ಮಲೆನಾಡು ಭಾಗದ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಲಾಗುವುದು ಎಂದರು.