

ಬೆಂಗಳೂರು : ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯಿಂದ ಕಾರು ಪಡೆದು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಆಲೂರು ಹಳ್ಳಿಯ ಹಂಸವೇಣಿ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಮನೀಶ್ ಮತ್ತು ಪಾಷಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಬಂಡೇಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.
2015ನೇ ಸಾಲಿನಲ್ಲಿ ಹಂಸವೇಣಿ, ಎಚ್‌ಡಿಎ್ಸಿ ಬ್ಯಾಂಕಿನಲ್ಲಿ 25 ಲಕ್ಷ ರೂ. ಸಾಲ ಪಡೆದು ಪಾಚ್ಯೂನರ್ ಕಾರು ಖರೀದಿಸಿದ್ದರು. 2015ರಲ್ಲಿ ಕೌಟುಂಬಿಕ ಕಲಹದಿಂದ ತನಿಖೆ ಸಲುವಾಗಿ ಸೂರ್ಯನಗರ ಠಾಣೆ ಪೊಲೀಸರು, ಕಾರನ್ನು ಜಪ್ತಿ ಮಾಡಿದ್ದರು. ಕೋರ್ಟ್ ಅನುಮತಿ ಪಡೆದು ಹಂಸವೇಣಿ, ಕಾರನ್ನು ವಾಪಸ್ ಪಡೆದಿದ್ದರು. ಆದರೆ, ಆರ್ಥಿಕ ಸಂಕಷ್ಟದಿಂದ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. 2018ರಲ್ಲಿ ಮಹಿಳೆ ಮನೆ ಬಳಿಗೆ ಇಬ್ಬರು ಬಂದು ಬ್ಯಾಂಕ್ ನೌಕರರು ಎಂದು ಪರಿಚಯ ಮಾಡಿಕೊಂಡು ಸಾಲ ಪಾವತಿ ಮಾಡುವಂತೆ ಹೇಳಿದ್ದರು.
ಆಗ ಮಹಿಳೆ, ಸದ್ಯ ಹಣ ಇಲ್ಲ. ಸಮಯ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪದ ವಂಚಕರು, ಪ್ರತಿ ತಿಂಗಳು 50 ಸಾವಿರ ರೂ. ಬಾಡಿಗೆ ಕೊಡುತ್ತೇವೆ. ನಿಮ್ಮ ಬ್ಯಾಂಕ್ ಸಾಲ 8 ಲಕ್ಷ ರೂ. ಪಾವತಿ ಆದ ಮೇಲೆ ನಿಮಗೆ ಕಾರು ಹಿಂತಿರುಗಿಸುತ್ತೇವೆ ಎಂದು ನಂಬಿಸಿ ಕಾರು ಪಡೆದು ಹೋಗಿದ್ದರು. ಮತ್ತೆ 2019ರ ಮೇ 13ರಂದು ಸಾಲ ಜಮೆ ಆಗಿದೆ ಎಂದು ಹೇಳಿ ಬ್ಯಾಂಕ್ ಎನ್‌ಒಸಿ ಕೊಟ್ಟು ಹೋಗಿದ್ದರು. ಕೆಲ ದಿನಗಳ ಬಳಿಕ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ನೊಂದ ಮಹಿಳೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.