ಫೈನಾನ್ಸ್ ಕಿರುಕುಳ ಖಂಡಿಸಿ ರೈತಸಂಘ ಪ್ರತಿಭಟನೆ

05 chn
Published on

ಚನ್ನಗಿರಿ: ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೂ ಸಾಲ ನೀಡಿದವರು ಮನೆಯ ಮುಂದೆ ಬಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಫೈನಾನ್ಸ್ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತಸಂಘದ ಹಸಿರುಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ಮಾತನಾಡಿ, ಗಜೇಂದ್ರ ಎನ್ನುವ ರೈತ ಮನೆ ಕಟ್ಟುವ ಸಲುವಾಗಿ 2022 ರಲ್ಲಿ 4.80 ಲಕ್ಷ ಸಾಲ ಪಡೆದು ಪ್ರತಿ ತಿಂಗಳು 11 ಸಾವಿರದಂತೆ 31 ತಿಂಗಳು ಮರುಪಾವತಿ ಮಾಡಿದ್ದಾರೆ. ರೈತನಿಗೆ ಸರಿಯಾದ ಮಾಹಿತಿ ನೀಡದೇ ಸಾಲ ನೀಡಿ, ಕಟ್ಟಿದ ಸಾಲದಲ್ಲಿ ಶೇ.21 ರಷ್ಟು ಬಡ್ಡಿ ಪಡೆದು ಸಾಲ ಬಾಕಿ ಉಳಿದಿದೆ ಎಂದು ಹೇಳುತ್ತಾರೆ. ಮನೆ ಬಳಿ ಹೋಗಿ ಹಿಂಸೆ ಮಾಡುತ್ತಿದ್ದಾರೆ. ಅವರ ವಿರುದ್ಧ ಠಾಣೆಗೆ ದೂರು ನೀಡಲಾಗುತ್ತದೆ ಎಂದರು.

ನೀಡಿದ ಸಾಲಕ್ಕೆ ಆರ್​ಬಿಐ ಕಾನೂನಿನ ಅಡಿಯಲ್ಲಿ ಇರುವ ಬಡ್ಡಿಯನ್ನು ಕಟ್ಟಲು ಸಿದ್ಧರಿದ್ದೆವೆ. ಹೆಚ್ಚಿನ ಬಡ್ಡಿಯನ್ನು ಕಟ್ಟಲು ಸಾಧ್ಯವಿಲ್ಲ. ಈಗಾಗಲೇ 3.80 ಲಕ್ಷ ಸಾಲವನ್ನು ಕಟ್ಟಲಾಗಿದೆ. ಉಳಿದ ಹಣದ ಜತೆ ಬ್ಯಾಂಕ್ ಬಡ್ಡಿಯನ್ನು ಸೇರಿಸಲು ಸಿದ್ಧರಿದ್ದೇವೆ. ಸರ್ಕಾರ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದರೂ ಫೈನಾನ್ಸ್​ನವರ ಕಾಟ ಸಾಲಗಾರಿಗೆ ತಪ್ಪಿಲ್ಲ. ರೈತರನ್ನು ಹಿಂಸೆ ಮಾಡುವುದು, ಮನೆಯ ಬಳಿ ಹೋಗಿ ತೊಂದರೆ ನೀಡುವುದು ಮಾಡಿದರೆ ರೈತಸಂಘ ಸುಮ್ಮನೇ ಕೂರುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಂವುಲ್ಲಾ, ರಾಜ್ಯ ಕಾರ್ಯದರ್ಶಿ ಚನ್ನಬಸಪ್ಪ, ಬಸವರಾಜ್, ಶಂಕರ್ ದೇವರಹಳ್ಳಿ, ಜಕ್ಕಲಿನಾಗರಾಜ್, ದಾವಣಗೆರೆ ಗಣೇಶ್, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net