

ಹುಬ್ಬಳ್ಳಿ: ಗುತ್ತಿಗೆದಾರರೊಬ್ಬರು 20 ಲಕ್ಷ ರೂ. ಸಾಲ ವಾಪಸ್ ಕೊಡದೇ ಸತಾಯಿಸುತ್ತಿದ್ದರಿಂದ ಮನನೊಂದ ಉಣಕಲ್ ಮೂಲದ ಗುರುಸಿದ್ದಪ್ಪ ಬೆಂಡಿಗೇರಿ ಎಂಬುವರು ಡೆತ್ ನೋಟ್ ಬರೆದಿಟ್ಟು ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಹುಬ್ಬಳಿಯ ದುರ್ಗದ ಬೈಲ್ ನ ಸಿ.ಸಿ. ಕಮ್ಮಾರ ಎಂಬುವರು ನನಗೆ ಕೊಡಬೇಕಿದ್ದ 20 ಲಕ್ಷ ರೂ. ಹಣ ಕೊಡದೇ ಸತಾಯಿಸುತ್ತಿದ್ದರು. ಇದರಿಂದ ನಾನು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಇದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೆರೆ ದಂಡೆಯಲ್ಲಿ ಐ-20 ಕಾರು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಕಲಘಟಗಿ ಠಾಣೆ ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಮೃತದೇಹ ಹೊರತೆಗೆದು ಕಲಘಟಗಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.