ಮಹಿಳಾ ಸ್ವ ಸಹಾಯ ಗುಂಪುಗಳಿಗೆ 2.5 ಕೋಟಿ ಬಡ್ಡಿರಹಿತ ಸಾಲ ವಿತರಣೆ

loan
Published on

ಉಡುಪಿ: ಮಹಿಳಾ ಮೀನುಗಾರರ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಮೂಲಕ ಮಂಜೂರುಗೊಂಡ ಶೂನ್ಯ ಬಡ್ಡಿದರದ ಸಾಲ ಯೋಜನೆಯ 2.5 ಕೋಟಿ ರೂ. ಮೊತ್ತದ ಚೆಕ್ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಹಿಳಾ ಮೀನುಗಾರರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ವಿಶೇಷ ಮುತುವರ್ಜಿಯಿಂದ ಅರ್ಹ ಮಹಿಳಾ ಮೀನುಗಾರರಿಗೆ ಈ ಸೌಲಭ್ಯ ತಲುಪಿಸಲು ಕಾರ್ಯಪ್ರವೃತ್ತವಾಗಿದೆ. ಅತಿ ಶೀಘ್ರದಲ್ಲೇ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಎಟಿಎಂ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದರು. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಉಚ್ಚಿಲ ಪಡು ಶಾಖೆಯ 13, ಹೆಜಮಾಡಿ ಶಾಖೆಯ 25, ಮಲ್ಪೆ ಶಾಖೆಯ 27, ಗಂಗೊಳ್ಳಿ ಶಾಖೆಯ 8 ಸ್ವಸಹಾಯ ಗುಂಪುಗಳ ಸುಮಾರು 750 ಮಂದಿ ಸದಸ್ಯರಿಗೆ 2.5 ಕೋಟಿ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು.  ಬ್ಯಾಂಕ್ ಉಪಾಧ್ಯಕ್ಷ ಮಾಧವ ಪಿ.ಸುವರ್ಣ, ನಿರ್ದೇಶಕರಾದ ಶಶಿಕಾಂತ್ ಪಡುಬಿದ್ರೆ, ಹೇಮನಾಥ ಜೆ.ಪುತ್ರನ್, ವೆಂಕಟರಮಣ ಎಚ್. ಕಿದಿಯೂರು, ರಾಮ ನಾಯ್ಕ, ವಿನಯ ಕರ್ಕೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net