ಬ್ಯಾಂಕ್ ಮೆಟ್ಟಿಲು ತುಳಿಯದೆ ಸಾಲಸೌಲಭ್ಯ

20KMT1_Mallige
Published on

ಕುಮಟಾ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳಿಕ ಜನಜೀವನ ಸಾಕಷ್ಟು ಸುಧಾರಣೆ ಕಂಡಿದೆ. ಸ್ತ್ರೀಯರು ಬ್ಯಾಂಕ್ ಮೆಟ್ಟಿಲು ತುಳಿಯದೆ ಸುಲಭವಾಗಿ ಸಾಲ ಸೌಲಭ್ಯ ಪಡೆದು ಆರ್ಥಿಕತೆ ಗಳಿಸಿ ಸುಲಭವಾಗಿ ಕಂತು ಪಾವತಿಸುತ್ತಿದ್ದಾರೆ. ಶಿಳ್ಳೆಯಲ್ಲಿ ಹಾಲಕ್ಕಿ ಸಮುದಾಯವು ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹತ್ತರ ಬದಲಾವಣೆ ಕಂಡಿದೆ ಎಂದು ದಿವಗಿ ಪಂಚಾಯಿತಿ ಮಾಜಿ ಅಧ್ಯಕ್ಷ ಹೇಮಂತಕುಮಾರ ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಮಿರ್ಜಾನ ವಲಯದ ದೀವಗಿ ಕಾರ್ಯಕ್ಷೇತ್ರದ ಶಿಳ್ಳೆ ಗ್ರಾಮದ ಶ್ರೀ ದುರ್ಗಾಂಬ ಜ್ಞಾನವಿಕಾಸ ಕೇಂದ್ರದಲ್ಲಿ ಭಟ್ಕಳ ಮಲ್ಲಿಗೆ ಕೃಷಿಯ ಸ್ವಉದ್ಯೋಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ಸಹಾಯಕ ಅಧಿಕಾರಿ ಮಧುರಾ ಪಟದ್ ಮಾತನಾಡಿ, ಭಟ್ಕಳ ಮಲ್ಲಿಗೆ ನಮ್ಮ ಕರಾವಳಿಗೆ ಸೀಮಿತವಾಗಿ ಲಾಭ ತರುವ ವಿಶೇಷ ಬೆಳೆಯಾಗಿದೆ. ಒಂದು ಎಕರೆ ಮಲ್ಲಿಗೆ ಗಿಡದ ತೋಟವು ಒಂದು ಕುಟುಂಬ ಸಾಕುವಲ್ಲಿ ಯಶಸ್ವಿಯಾಗುತ್ತದೆ ಎಂದರು.

ಯೋಜನಾಧಿಕಾರಿ ಕಲ್ಮೇಶ ಮಾತನಾಡಿದರು. ಭಟ್ಕಳ ಮಲ್ಲಿಗೆಯ ಗಿಡವನ್ನು ಸಾಂಕೇತಿಕವಾಗಿ ನಾಟಿ ಮಾಡಲಾಯಿತು. ಭಟ್ಕಳ ಮಲ್ಲಿಗೆ ಕೃಷಿಯನ್ನು ಸ್ವಉದ್ಯೋಗವಾಗಿ ಆಯ್ಕೆ ಮಾಡಿಕೊಂಡ ಶಿಳ್ಳೆ ಗ್ರಾಮದ ಎಂಟು ಕುಟುಂಬಗಳಿಗೆ ನಾಟಿ ಯೋಗ್ಯವಾದ ಭಟ್ಕಳ ಮಲ್ಲಿಗೆ ಗಿಡಗಳನ್ನು ವಿತರಿಸಲಾಯಿತು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ವೀಣಾ ದಿನೇಶ, ಸೇವಾ ಪ್ರತಿನಿಧಿ ಮಂಗಳ ದೇಶಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net